ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನ ನಡಾಯಿಪಲ್ಕೆ ಎಂಬಲ್ಲಿ ಹೊಳೆಗೆ ಬಿದ್ದು 60 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನ ನಡಾಯಿಪಲ್ಕೆ ಎಂಬಲ್ಲಿ ಹೊಳೆಗೆ ಬಿದ್ದು 60 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೇಬಿ ಶೆಟ್ಟಿ (55 ) ಸಾವನ್ನಪ್ಪಿದ ದುರ್ದೈವಿ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಮೇಯಲು ಹೋಗಿದ್ದ ತನ್ನ ದನಗಳನ್ನು ಹುಡುಕಿಕೊಂಡು ಬೇಬಿ ಶೆಟ್ಟಿಯವರು ಸಮೀಪದ ಕಾಡಿಗೆ ಹೋಗಿದ್ದರು. ಈ ವೇಳೆ ಸಮೀಪದಲ್ಲಿ ತುಂಬಿ ಹರಿಯುತ್ತಿದ್ದ ಹೊಳೆಗೆ ಕಾಲು ಜಾರಿ ಬಿದ್ದು, ಸಾವನ್ನಪ್ಪಿದ್ದಾರೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ನಡುವೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಗುರುವಾರ ರಾತ್ರಿ ಕಾರ್ಕಳ ತಾಲೂಕಿನ ಬೆಳ್ಮಣ್ಣು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಮರ ಬಿದ್ದು ಮೃತಪಟ್ಟ ಪ್ರವೀಣ್ ಆಚಾರ್ಯ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದರು. ಈ ವೇಳೆ ಘಟನೆಗೆ ಸಂತಾಪ ಸೂಚಿಸಿ, ಕುಟುಂಬಸ್ಥರಿಗೆ ಪರಿಹಾರದ ಮೊತ್ತವಾಗಿ ರೂ.5 ಲಕ್ಷ ಚೆಕ್’ನ್ನು ಹಸ್ತಾಂತರಿಸಿದರು.
ಈ ನಡುವೆ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮಣ್ಣು ಕುಸಿತ, ಮರಗಳ ಧರೆಗುರುಳಿರುವುದು ಹಾಗೂ ಸೇತುವೆ ಮುಳುಗಡೆಯಾದ ಘಟನೆಗಳು ವರದಿಯಾಗಿವೆ.
ಕೊಪ್ಪ ತಾಲೂಕಿನ ಕೂಳೂರು ಸಮೀಪದ ಮಡುವಿನಕೆರೆ ಗ್ರಾಮದಲ್ಲಿ ನರತನ ಎಂಬುವವರ ಮನೆ ಮೇಲೆ ದೈತ್ಯಕಾರ ಹಲಸಿನ ಮರ ಬಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಈ ನಡುವೆ ಸ್ಥಳಕ್ಕೆ ಭೇಟಿ ನೀಡಿದ ಪಂಚಾಯಿತಿ ಹಾಗೂ ಕಂದಾಯ ಅಧಿಕಾರಿಗಳು ಹಾನಿಯ ಅಂದಾಜು ಮಾಡಿದರು.
ಭದ್ರಾ ನದಿಯ ಪ್ರವಾಹದಿಂದ ಕಳಸ ತಾಲೂಕಿನ ಕಗ್ಗನಳ್ಳ ಗ್ರಾಮದ ಕಾಲುಸಂಕ ಸಂಪೂರ್ಣ ಮುಳುಗಡೆಯಾಗಿದ್ದು, ಹೊಳಲು, ಬಾಳೆಹೊಳೆ ಎಸ್ಟೇಟ್, ಬಿಳುಗೂರು, ಬೀರಗಲ್, ಹೆಮ್ಮಕ್ಕಿ, ಗಬಗಲ್ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.