ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ಹಿಂದೂ ಯುವತಿಯರ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹಂಚಿಕೊಳ್ಳುವುದು ಮತ್ತು ಪ್ರಸಾರ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಕರ್ನಾಟಕ ಪೊಲೀಸರು… ಉಡುಪಿ: ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ಹಿಂದೂ ಯುವತಿಯರ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹಂಚಿಕೊಳ್ಳುವುದು ಮತ್ತು ಪ್ರಸಾರ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಕರ್ನಾಟಕ ಪೊಲೀಸರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ರೆಸ್ಟ್ ರೂಂನಲ್ಲಿ ಹಿಂದೂ ಹುಡುಗಿಯರ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಹಾಕೆ ಅಕ್ಷಯ್ ಮಚ್ಚಿಂದ್ರ ಅವರು, ಈ ಸಂಬಂಧ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಜನತೆಗೆ ಮನವಿ ಮಾಡಿದ್ದಾರೆ.
ಜನರಲ್ಲಿ ಗೊಂದಲ ಮೂಡಿಸಲು ವದಂತಿಗಳನ್ನು ಹಬ್ಬಿಸಬಾರದು. ಯಾವುದೇ ದಾಖಲೆ, ಸಾಕ್ಷ್ಯಾಧಾರಗಳು ಲಭ್ಯವಿದ್ದಲ್ಲಿ ಅದನ್ನು ಪೊಲೀಸರಿಗೆ ಒಪ್ಪಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ರೆಸ್ಟ್ ರೂಂನಲ್ಲಿ ಹಿಂದೂ ಹುಡುಗಿಯರ ವಿಡಿಯೋ ರೆಕಾರ್ಡ್ ಮಾಡಿದ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಯಾವುದೇ ಸುಳಿವು ಲಭ್ಯವಾಗಿಲ್ಲ. ಆರೋಪಿಗಳ ಮೊಬೈಲ್‌ನಲ್ಲಿ ಯಾವುದೇ ಫೋಟೋ ಮತ್ತು ವಿಡಿಯೋ ಲಭ್ಯವಿಲ್ಲ. ಕಾಲೇಜಿನ ನಿಯಮಗಳ ಪ್ರಕಾರ ಅವರನ್ನು ವಿಚಾರಣೆ ನಡೆಸಲಾಗಿದೆ. ಅವರು ತಮಾಷೆಗಾಗಿ ಮಾಡಿರುವುದಾಗಿ ಹುಡುಗಿಯರು ಹೇಳಿದ್ದಾರೆ ಎಂದರು.
ಇದನ್ನು ಓದಿ: ರೆಸ್ಟ್ ರೂಂನಲ್ಲಿ ಸಹ ವಿದ್ಯಾರ್ಥಿನಿಯ ವಿಡಿಯೋ ಮಾಡಿದ ಮೂವರು ಕಾಲೇಜು ವಿದ್ಯಾರ್ಥಿನಿಯರ ಅಮಾನತು
“ಮಹಿಳಾ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾಗಳನ್ನು ಬಳಸಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಹರಿಬಿಟ್ಟಿರುವ ವಿಡಿಯೋ ನಕಲಿ. ಬ್ಲ್ಯಾಕ್ ಮೇಲ್ ಗಾಗಿ ಪ್ರಸಾರವಾಗುತ್ತಿರುವ ವೀಡಿಯೊಗಳ ಮೇಲೆ ನಾವು ಗಮನಹರಿಸಿದ್ದೇವೆ. ಸತ್ಯವನ್ನು ತಿಳಿಯದೆ ಕೇವಲ ಸಂದೇಶಗಳನ್ನು ಫಾರ್ವರ್ಡ್ ಮಾಡುವುದು ತಪ್ಪು. ಈ ನಿಟ್ಟಿನಲ್ಲಿ ಫೇಸ್‌ಬುಕ್ ಮತ್ತು ವಾಟ್ಸಾಪ್ ವೈರಲ್ ಪೋಸ್ಟ್‌ಗಳ ಮೇಲೆ ನಿಗಾ ಇಡಲಾಗಿದೆ” ಎಂದರು.
ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ. “ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಹೆಸರುವಾಸಿಯಾಗಿದ್ದು, ಇಲ್ಲಿ ಮಹಿಳೆಯರಿಗೆ ಗೌರವವಿದೆ. ಈ ಹೆಣ್ಣುಮಕ್ಕಳ ಕೃತ್ಯ ಜಿಲ್ಲೆಯ ಜನತೆ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ. ಈ ಕೃತ್ಯದಿಂದ ಇಡೀ ಜಿಲ್ಲೆಗೆ ಅವಮಾನವಾಗಿದೆ. ಇನ್ನು ಈ ವಿಷಯದಲ್ಲಿ ಮೋಜು ಮಸ್ತಿಗೆ ಅವಕಾಶ ಇಲ್ಲ. ಈ ಕೃತ್ಯದ ಹಿಂದೆ ಕಾಣದ ಕೈಗಳ ಕೈವಾಡವಿದೆ. ಘಟನೆಯ ಬಗ್ಗೆ ನನಗೆ ಸಂಶಯವಿದೆ. ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟಿರುವುದು ಸರಿಯಲ್ಲ ಎಂದಿದ್ದಾರೆ.