Home Uncategorized ಉಡುಪಿ: ಬಾಲಕಿಗೆ ಲೈಂಗಿಕ ದೌರ್ಜನ್ಯ; ಪೋಕ್ಸೊ ಆರೋಪಿಗೆ 20 ವರ್ಷ ಕಠಿಣ ಜೈಲುಶಿಕ್ಷೆ, ದಂಡ

ಉಡುಪಿ: ಬಾಲಕಿಗೆ ಲೈಂಗಿಕ ದೌರ್ಜನ್ಯ; ಪೋಕ್ಸೊ ಆರೋಪಿಗೆ 20 ವರ್ಷ ಕಠಿಣ ಜೈಲುಶಿಕ್ಷೆ, ದಂಡ

38
0

ಉಡುಪಿ: 2 ವರ್ಷಗಳ ಹಿಂದೆ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ 20ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.

ಬೈಂದೂರು ನಿವಾಸಿ ಧೀರಜ್ (23) ಶಿಕ್ಷೆಗೆ ಗುರಿಯಾಗಿರುವ ಆರೋಪಿ.

ಈತ ಕುಂದಾಪುರ ತಾಲೂಕಿನ 16 ವರ್ಷ ಪ್ರಾಯದ ಬಾಲಕಿಯನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿ, ಆಕೆಯನ್ನು ಪುಸಲಾಯಿಸಿ, 2022ರ ಜೂ.15ರಂದು ತನ್ನ ವಾಹನದಲ್ಲಿ ಉಡುಪಿಯಲ್ಲಿರುವ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಆಕೆಯೊಂದಿಗೆ ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿದ್ದು, ಆ ಸಮಯ ಗಸ್ತು ಕರ್ತವ್ಯದಲ್ಲಿದ್ದ ಉಡುಪಿ ನಗರ ಠಾಣೆ ಪೊಲೀಸರು, ಮಾಹಿತಿಯಂತೆ ಲಾಡ್ಜ್‌ಗೆ ದಾಳಿ ನಡೆಸಿದರು. ಪರಿಶೀಲಿಸಿದಾಗ ಆರೋಪಿ ಬಾಲಕಿಗೆ ದೌರ್ಜನ್ಯ ಎಸಗಿರು ವುದು ಕಂಡುಬಂದಿದ್ದು, ಈ ಬಗ್ಗೆ ಹೆತ್ತವರಿಗೆ ಪೊಲೀಸರು ಮಾಹಿತಿ ನೀಡಿದರು.

ಈ ಕುರಿತು ಪೋಷಕರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಠಾಣಾ ನಿರೀಕ್ಷಕ ಜಯಂತ್ ಎಂ. ಮತ್ತು ಮಂಜುನಾಥ್ ತನಿಖೆ ನಡೆಸಿದರು. ಶರಣ ಗೌಡ ವಿ.ಎಚ್. ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ನ್ಯಾಯಾಲಯವು ಒಟ್ಟು 30 ಮಂದಿ ಸಾಕ್ಷಿಗಳ ಪೈಕಿ 17 ಸಾಕ್ಷಿಗಳ ವಿಚಾರಣೆ ನಡೆಸಿದ್ದು, ನೊಂದ ಬಾಲಕಿಯ ಸಾಕ್ಷಿ ಮತ್ತು ಪರೀಕ್ಷೆ ನಡೆಸಿದ ಮಣಿಪಾಲ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ನೀಡಿದ ವರದಿ ಯಲ್ಲಿ ದೈಹಿಕ ದೌರ್ಜನ್ಯ ಎಸಗಿರುವುದು ಕಂಡುಬಂದಿದೆ.

ಅದರಂತೆ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿಗೆ 20ವರ್ಷ ಕಠಿಣ ಶಿಕ್ಷೆ, 20ಸಾವಿರ ರೂ. ದಂಡ ವಿಧಿಸಿದೆ. ದಂಡದಲ್ಲಿ 5000ರೂ. ಸರಕಾರಕ್ಕೆ, 15ಸಾವಿರ ರೂ. ನೊಂದ ಬಾಲಕಿಗೆ ನೀಡಬೇಕು ಮತ್ತು ಸರಕಾರದಿಂದ ನೊಂದ ಬಾಲಕಿಗೆ 1.50ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದಾರೆ.

LEAVE A REPLY

Please enter your comment!
Please enter your name here