ಉಡುಪಿ, ಜ.24: ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆಯ ದಿನ ಬನ್ನಂಜೆ ನಾರಾಯಣಗುರು ಮಂದಿರದಲ್ಲಿ ಧ್ವಜ ಹಾಕಿಲ್ಲ ಎಂದು ಆರೋಪಿಸಿ ಉಡುಪಿ ಬಿಲ್ಲವರ ಸೇವಾ ಸಂಘದ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಮಾಡಿರುವ ಕಿಡಿಗೇಡಿ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸಂಘದ ನಿಯೋಗ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಅವರಿಗೆ ಮನವಿ ಸಲ್ಲಿಸಿತು.
ಬಿಲ್ಲವ ಸಮಾಜದ ಘನವೆತ್ತ ಸಂಸ್ಥೆಗಳಲ್ಲಿ ಮುಖ್ಯವಾಗಿರುವ ಉಡುಪಿ ಬಿಲ್ಲವ ಸೇವಾ ಸಂಘದ ಕುರಿತು ಕಿಡಿಗೇಡಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ. ಇದು ಸಂಘಕ್ಕೆ ಅಪವಾದವಾಗಿದ್ದು, ಇದನ್ನು ಇಡೀ ಸಮಾಜ ಒಕ್ಕೊರಲಿನಿಂದ ಖಂಡಿಸುತ್ತದೆ. ಬ್ರಹ್ಮಶ್ರೀ ನಾರಾಯಣಗುರುಗಳ ಮಂದಿರದಲ್ಲಿ ನಿತ್ಯ ಪೂಜೆ ಹಾಗೂ ವಿಶೇಷ ಸೇವೆಗಳು ನಡೆಯುತ್ತಿದ್ದು, ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ಅಂಗವಾಗಿ ಜ.22ರಂದು ಮಂದಿರದಲ್ಲಿ ಪೂಜೆಯನ್ನು ನಡೆಸಲಾಗಿದೆ. ಆದರೆ ಪೂರ್ವಾಗ್ರಹಪೀಡಿತ ವ್ಯಕ್ತಿಯೊಬ್ಬ ಸಂಘದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವ ಕುರಿತು ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ದುರುದ್ದೇಶಪೂರ್ವಕ ನಡವಳಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕುರಿತು ಕುಲಂಕಷ ತನಿಖೆ ನಡೆಸಿ ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ನಿಯೋಗದಲ್ಲಿ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಕಾರ್ಯದರ್ಶಿ ಶಶಿಧರ್ ಎಂ.ಅಮೀನ್, ಕೋಶಾಧಿಕಾರಿ ಗೋಪಾಲ ಪೂಜಾರಿ, ಮುಖಂಡರಾದ ಆನಂದ ಪೂಜಾರಿ ಕಿದಿಯೂರು, ಕೃಷ್ಣ ಅಂಚನ್, ಉದಯ ಪೂಜಾರಿ ಕಲ್ಯಾಣಪುರ, ಪೂರ್ಣಿಮಾ ಎಸ್.ಅಂಚನ್, ಗಿರಿರಾಜ್ ಪೂಜಾರಿ, ರಾಜು ಪೂಜಾರಿ ಉಪ್ಪೂರು, ಗಣೇಶ್ ಕೋಟ್ಯಾನ್ ಗುಂಡಿಬೈಲು, ಗೋವರ್ಧನ್ ಮೊದಲಾದವರು ಉಪಸ್ಥಿತರಿದ್ದರು.
———————-
‘ಬಿಲ್ಲವ ಸಮಾಜದ ವ್ಯಕ್ತಿಯೆಂದು ಹೇಳಿಕೊಂಡು ಸಂಘದ ವಿರುದ್ಧ ವೀಡಿಯೊ ಮಾಡಲಾಗಿದ್ದು, ಇದರಿಂದ ಇಡೀ ಸಮಾಜಕ್ಕೆ ನೋವುಂಟಾಗಿದೆ. ಬಿಲ್ಲವ ಸಂಘ ಒಟ್ಟಾಗಿ ಎಸ್ಪಿಗೆ ದೂರು ಕೊಟ್ಟಿದ್ದೇವೆ. ಮುಂದೆ ರೀತಿ ಯಾವುದೇ ಸಮುದಾಯಕ್ಕೂ ಆಗಬಾರದು. ನಾವೆಲ್ಲರೂ ರಾಮ ಭಕ್ತರೇ ಆಗಿದ್ದೇವೆ. ನಮ್ಮ ಭಕ್ತಿಯನ್ನು ಹೊರಗಡೆ ಬಾವುಟ ಹಾಕಿಕೊಂಡು ತೋರಿಸಬೇಕಾಗಿಲ್ಲ. ಮಂದಿರದೊಳಗೆ ವಿಶೇಷ ಪೂಜೆ ಮಾಡಿದ್ದೇವೆ. ನಾರಾಯಣಗುರು ಅವರ ತತ್ವದಡಿ ನಾವು ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ’
-ಮಾಧವ ಬನ್ನಂಜೆ, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಉಡುಪಿ