Home Uncategorized ಉಡುಪಿ: ಮಾರ್ಚ್ 3ರಿಂದ 66,852 ಮಕ್ಕಳಿಗೆ ಪೋಲಿಯೋ ಲಸಿಕೆಗೆ ಕ್ರಮ

ಉಡುಪಿ: ಮಾರ್ಚ್ 3ರಿಂದ 66,852 ಮಕ್ಕಳಿಗೆ ಪೋಲಿಯೋ ಲಸಿಕೆಗೆ ಕ್ರಮ

29
0

ಉಡುಪಿ: ಜಿಲ್ಲೆಯಲ್ಲಿ ಮಾರ್ಚ್ 3ರಿಂದ 6ರವರೆಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, 0-5 ವರ್ಷದೊಳಗಿನ ಗ್ರಾಮೀಣ ಪ್ರದೇಶದ 53,661 ಹಾಗೂ ನಗರ ಪ್ರದೇಶದ 13,191 ಮಕ್ಕಳು ಸೇರಿದಂತೆ ಜಿಲ್ಲೆಯ ಒಟ್ಟು 66,852 ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು 660 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.

ಭಾರತ 12 ವರ್ಷಕ್ಕೂ ಮೇಲ್ಪಟ್ಟಂತೆ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಆದರೂ ಭಾರತದ ನೆರೆರಾಷ್ಟ್ರಗಳಲ್ಲಿ ವೈಲ್ಡ್ ಪೋಲಿಯೋ ವೈರಸ್ ಇರುವುದು ಆತಂಕಕ್ಕೆ ಕಾರಣವಾಗಿದ್ದು, ಹೀಗಾಗಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ಭಾರತ ತಜ್ಞ ಸಲಹಾ ಗುಂಪಿನ ಶಿಫಾರಸ್ಸಿನ ಅನ್ವಯ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ)ವನ್ನು ಮಾ.3ರಂದು ನಡೆಸಲು ಸರಕಾರ ಆದೇಶಿಸಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 568, ನಗರ ಪ್ರದೇಶದಲ್ಲಿ 92, 6 ಮೊಬೈಲ್ ಟೀಮ್, 31 ಟ್ರಾನ್ಸಿಟ್ ಬೂತ್‌ಗಳಲ್ಲಿ ಮತ್ತು ಎಲ್ಲಾ ಟೋಲ್‌ಗೇಟ್‌ಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದು 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ.

ಕಾರ್ಯಕ್ರಮವನ್ನು ಆರೋಗ್ಯ, ಪಂಚಾಯತ್ ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಗರಸಭೆ, ಕಂದಾಯ ಇಲಾಖೆ ಮತ್ತು ಇತರ ಇಲಾಖೆ, ರೋಟರಿ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳ ಸಹಕಾರ ಹಾಗೂ ಜಿಲ್ಲಾಡಳಿತದ ಮಾರ್ಗದರ್ಶನದೊಂದಿಗೆ ನಡೆಸಲಾಗುತಿದ್ದು, 2788 ಲಸಿಕಾ ಸ್ವಯಂಸೇವಕರು, 144 ಮೇಲ್ವಿಚಾರಕರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಾರ್ವಜನಿಕರು, ವಲಸೆ ಕಾರ್ಮಿಕರು, ಕೊಳಚೆ ನಿವಾಸಿಗಳು ತಮ್ಮ 0-5 ವರ್ಷದೊಳಗಿನ ಮಕ್ಕಳಿಗೆ ಮಾ.3ರಂದು ಲಸಿಕಾ ಕೇಂದ್ರಗಳಿಗೆ ತೆರಳಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಮಾ.4 ಮತ್ತು 5ರಂದು ಹಾಗೂ ನಗರ ಪ್ರದೇಶದಲ್ಲಿ ಮಾ.4ರಿಂದ 6ರವರೆಗೆ ಸ್ವಯಂಸೇವಕರು ಮನೆಗಳಿಗೆ ಭೇಟಿ ನೀಡಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಹನಿ ಹಾಕಿಸಿದ ಬಗ್ಗೆ ಮಾಹಿತಿ ಕಲೆಹಾಕಲಿ ದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಹಾಜಿ ಅಬ್ದುಲ್ಲ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಉದ್ಘಾಟನೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉದ್ಘಾಟನೆಯು ಮಾರ್ಚ್ 3ರಂದು ಬೆಳಗ್ಗೆ 8 ಗಂಟೆಗೆ ನಗರದ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ – ಮಕ್ಕಳ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here