Home Uncategorized ಉತ್ತರ ಕನ್ನಡ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೆಚ್ಚಾದ ಪ್ರತ್ಯೇಕ ಜಿಲ್ಲೆಯ ಕೂಗು

ಉತ್ತರ ಕನ್ನಡ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೆಚ್ಚಾದ ಪ್ರತ್ಯೇಕ ಜಿಲ್ಲೆಯ ಕೂಗು

25
0

ಉತ್ತರ ಕನ್ನಡ: ಈ ಬಾರಿ ಜಿಲ್ಲೆಯಲ್ಲಿ ಕೆಲ ರಾಜಕಾರಣಿಗಳು ಪ್ರತ್ಯೇಕ ಜಿಲ್ಲೆಯ ಅಸ್ತ್ರವನ್ನ ಚುನಾವಣೆಯಲ್ಲಿ ಬಳಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬಂದ ಬೆನ್ನಲ್ಲೆ ಶಿರಸಿ ಕ್ಷೇತ್ರದ ಶಾಸಕ ವಿಧಾನಸಭಾ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿಯ ಕಾರ್ಯಕ್ರಮವೊಂದರಲ್ಲಿ ಪ್ರತ್ಯೇಕ ಜಿಲ್ಲೆಯ ಧ್ವನಿ ಎತ್ತಿದ್ದರು. ಜಿಲ್ಲೆಯು ಭೌಗೋಳಿಕವಾಗಿ ದೊಡ್ಡದಿದ್ದು, ಪ್ರತ್ಯೇಕ ಜಿಲ್ಲೆಯ ಅಗತ್ಯವನ್ನ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಈ ಹೇಳಿಕೆ ಕೆಲವರ ವಿರೋಧಕ್ಕೆ ಸಹ ಕಾರಣವಾಗಿದ್ದು ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳನ್ನ ಚುನಾವಣೆ ವೇಳೆ ಮುಚ್ಚಿ ಹಾಕಲು ಜಿಲ್ಲೆ ವಿಭಜನೆ ಎನ್ನುವ ಅಸ್ತ್ರವನ್ನ ಬಿಟ್ಟಿದ್ದಾರೆ ಎನ್ನುತ್ತಿದ್ದಾರೆ.

ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಅಭಿವೃದ್ಧಿ ದೃಷ್ಟಿಯಿಂದ ಶಿರಸಿ ಪ್ರತ್ಯೇಕ ಜಿಲ್ಲೆ ಆದರೆ ಉತ್ತಮ. ಕೆಲವರ ಭಾವನೆಗಳಿಗೆ ಜಿಲ್ಲೆ ವಿಭಜನೆ ಆಗುವುದು ಬೇಡ ಎನ್ನುವುದು ಇದೆ. ತಜ್ಞರ ಜೊತೆಗೆ ಚರ್ಚೆ ಮಾಡಿ ಆದಷ್ಟು ಶೀಘ್ರದಲ್ಲಯೇ ಒಂದು ನಿರ್ಧಾರಕ್ಕೆ ಬರುತ್ತೆವೆ ಎನ್ನುತ್ತಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಬಹುತೇಕ ಏಪ್ರಿಲ್ ವೇಳೆಯಲ್ಲಿ ನಡೆಯುವ ಸಾಧ್ಯತೆಗಳಿವೆ. ರಾಜಕೀಯ ಪಕ್ಷಗಳು ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಎನ್ನುವ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲುವಿಗಾಗಿ ಜನರ ಮುಂದೆ ನಾನಾ ಪ್ರಯತ್ನಕ್ಕೆ ಇಳಿದಿದ್ದಾರೆ. ಸದ್ಯ ಉತ್ತರಕನ್ನಡ ಜಿಲ್ಲೆಯಲ್ಲೂ ಚುನಾವಣಾ ಕಾವು ರಂಗೇರಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಘಟ್ಟದ ಮೇಲೆ ಹಾಗೂ ಕರಾವಳಿ ಭಾಗ ಸೇರಿ ಒಟ್ಟೂ 12 ತಾಲೂಕುಗಳಿವೆ. ಘಟ್ಟದ ಮೇಲಿನ ತಾಲೂಕುಗಳನ್ನ ಒಂದು ಜಿಲ್ಲೆ ಹಾಗೂ ಕರಾವಳಿ ಭಾಗವನ್ನ ಮತ್ತೊಂದು ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವುದು ಕೆಲವರ ಬೇಡಿಕೆ. ಆದರೆ ಜನಸಂಖ್ಯೆಯೇ ಅಧಿಕವಿಲ್ಲದ ಜಿಲ್ಲೆಯನ್ನ ವಿಭಜನೆ ಮಾಡಿ ಏನು ಪ್ರಯೋಜನ. ಜಿಲ್ಲೆ ವಿಭಜನೆ ಮಾಡಿ ಸಣ್ಣದಾಗಿ ಮಾಡಿದರೆ ಅಭಿವೃದ್ದಿ ಆಗಲಿದೆ ಎನ್ನುವುದು ತಪ್ಪು ಕಲ್ಪನೆ ಎನ್ನುವ ಟೀಕೆ ವ್ಯಕ್ತವಾಗಿದೆ. ಇನ್ನು ಚುನಾವಣೆಯಲ್ಲಿ ಗೆಲ್ಲಲು ಇಂತಹ ವಿಚಾರವನ್ನ ಕಾಗೇರಿಯವರು ಅಸ್ತ್ರವನ್ನಾಗಿ ಇಟ್ಟುಕೊಳ್ಳಬಾರದು ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

ಜಿಲ್ಲೆಯ ವಿಭಜನೆ ಬಗ್ಗೆ ಸಚಿವ ಶಿವರಾಮ್​ ಹಬ್ಬಾರ್​ ಅವರ ಬಳಿ ಕೇಳಿದರೆ ಸುಮ್ಮನೇ ಜಿಲ್ಲೆಯನ್ನ ವಿಭಜನೆ ಮಾಡಲು ಸಾಧ್ಯವಿಲ್ಲ. ಅದು ಕಾಗೇರಿಯವರ ಸ್ವಂತ ಅಭಿಪ್ರಾಯ. ಹಾಗೇನಾದರು ವಿಭಜನೆ ಮಾಡುವುದಾದರೆ ತಜ್ಞರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ನಾನು ಯಾವತ್ತು ಜಿಲ್ಲೆ ಇಬ್ಬಾಗ ಆಗಲಿ ಎಂದು ಹೇಳಿಲ್ಲ. ಇವತ್ತು ಹೇಳುವುದಿಲ್ಲ ನಾನು ಜಿಲ್ಲಾ ಉಸ್ತುವಾರಿ ಮಂತ್ರಿ ಅಲ್ಲ, ಆಡಳಿತಾತ್ಮಕ ದೃಷ್ಟಿಯಿಂದ ಒಳ್ಳೆಯದಾದರೆ ಆಗಲಿ, ಬದಲಾವಣೆ ಒಳ್ಳೆಯದೆ ಎಂದಿದ್ದಾರೆ.

ಇದನ್ನೂ ಓದಿ:ಚಿಕ್ಕೋಡಿ: ಪ್ರತ್ಯೇಕ ಜಿಲ್ಲೆಗಾಗಿ ಬೇಡಿಕೆ; ಚಳಿಗಾಲ ಅಧಿವೇಶನ ಮುಗಿಯುವವರೆಗೂ ನಿರಂತರ ಹೋರಾಟ

ಶಿರಸಿ ಪ್ರತ್ಯೇಕ ಜಿಲ್ಲೆಯ ಬಗ್ಗೆ ಕೇವಲ ಕಾಗೇರಿಯವರು ಮಾತ್ರ ಧ್ವನಿ ಎತ್ತಿದ್ದಾರೆ. ಆದರೆ ಘಟ್ಟದ ಮೇಲಿನ ತಾಲೂಕಿನ ಶಾಸಕರಾದ ಮಾಜಿ ಸಚಿವ ಆರ್​.ವಿ ದೇಶಪಾಂಡೆಯಾಗಲಿ, ಸಚಿವ ಶಿವರಾಮ್ ಹೆಬ್ಬಾರ್​ ಅವರುಗಳಿಗೆ ಈ ಬಗ್ಗೆ ಆಸಕ್ತಿ ಇಲ್ಲದಂತಾಗಿದ್ದು, ಜಿಲ್ಲೆಯಲ್ಲಿ ಹನ್ನೆರಡು ತಾಲೂಕುಗಳಿದ್ದರೂ ಕ್ಷೇತ್ರಗಳು ಮಾತ್ರ ಕೇವಲ ಆರಿದೆ. ಮೂರು ಮೂರು ಕ್ಷೇತ್ರಕ್ಕೆ ಒಂದು ಜಿಲ್ಲೆಯಾದರೆ ಹೇಗೆ ಎನ್ನುವುದು ಕೆಲವರ ಅಭಿಪ್ರಾಯ. ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತ್ಯೇಕ ಜಿಲ್ಲೆಯ ಕೂಗು ಜೋರಾಗಿ ಕೇಳಿ ಬರುತ್ತಿದ್ದು ಇದು ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.

ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here