ಬರೇಲಿ: ರೆಸ್ಟೋರೆಂಟ್‍ನಲ್ಲಿ ಬೀಫ್ ಬರ್ಗರ್ ಮಾರಾಟ ಮಾಡಿದ ಆರೋಪದಲ್ಲಿ, ಸಂಘ ಪರಿವಾರ ಸಂಘಟನೆಯ ಕಾರ್ಯಕರ್ತರ ಪ್ರತಿಭಟನೆ ಬಳಿಕ ರೆಸ್ಟೋರೆಂಟ್ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಫ್ಘಾನ್ ಕೆಫೆಯ ಮೆನುವಿನಲ್ಲಿ ʼಬೀಫ್ ಬರ್ಗರ್ʼ ಇದೆ ಎಂಬ ಆಕ್ಷೇಪದ ಬಳಿಕ ಪ್ರತಿಭಟನೆ ನಡೆಸಲಾಯಿತು. ರೆಸ್ಟೋರೆಂಟ್ ಮಾಲೀಕರ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 505 (2) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
“ಗೋಹತ್ಯೆ ಮಾಡುವುದು ಮತ್ತು ಗೋಮಾಂಸವನ್ನು ಸಾಗಾಟ ಮಾಡುವುದು ಉತ್ತರ ಪ್ರದೇಶದಲ್ಲಿ ನಿಷಿದ್ಧ ಎಂದು ಗೊತ್ತಿದ್ದರೂ, ರೆಸ್ಟೋರೆಂಟ್ ಮಾಲಕ ಬೀಫ್ ಬರ್ಗರ್ ಮಾರಾಟ ಮಾಡುತ್ತಿದ್ದರು ಎಂದು ಬಜರಂಗದಳದ ಮುಖಂಡ ಅಭಿನವ್ ಭಟ್ನಾಗರ್ ಹೇಳಿದ್ದಾರೆ.
ಇದು ನಮ್ಮನ್ನು ಪ್ರಚೋದಿಸುವ ಮತ್ತು ನಮ್ಮ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಡುಮಾಡುವ ಪ್ರಯತ್ನ. ಇಂಥ ಕ್ರಮವನ್ನು ನಾವು ಸಹಿಸುವುದಿಲ್ಲ ಎಂದು ಅವರು ಹೇಳಿದರು.
ರೆಸ್ಟೋರೆಂಟ್ ಮಾಲಕನನ್ನು ಬಂಧಿಸಲಾಗಿದ್ದು, ಬೀಫ್ ಬರ್ಗರ್ ಎಂದು ಮೆನುವಿನಲ್ಲಿ ಪ್ರಮಾದವಶಾತ್ ಮುದ್ರಿಸಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಅಖಿಲೇಶ್ ಭಡಾರಿಯಾ ಹೇಳಿದ್ದಾರೆ.