Home Uncategorized ಉಪ್ಪಿನಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜಿಗೆ ವಿವೇಕ ಯೋಜನೆಯಡಿ ಅನುದಾನ ಬಿಡುಗಡೆ

ಉಪ್ಪಿನಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜಿಗೆ ವಿವೇಕ ಯೋಜನೆಯಡಿ ಅನುದಾನ ಬಿಡುಗಡೆ

31
0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶಾಸಕರಾದ ಅಶೋಕ್ ಕುಮಾರ್ ರೈಯವರು ವಿವೇಕ ಯೋಜನೆಯಡಿ ಮೂರು ಕೋಟಿಯ ಅರುವತ್ತು ಸಾವಿರ ರೂ. ಅನುದಾನ ಒದಗಿಸಿದ್ದು, ಇದರೊಂದಿಗೆ ಅಪೂರ್ಣ ಹಂತದಲ್ಲಿರುವ ಎರಡು ಕೊಠಡಿಗಳ ಛಾವಣಿಗಾಗಿ 10 ಲಕ್ಷ ರೂ. ಹೆಚ್ಚುವರಿ ಅನುದಾನವನ್ನು ನೀಡಿದ್ದಾರೆ. ಈ ಕಾಮಗಾರಿಗಳ ಶಂಕು ಸ್ಥಾಪನೆ ಜ.30ರಂದು ನಡೆಯಲಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕಾರ್ ತಿಳಿಸಿದರು.

ಕಾಲೇಜಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜು ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ ಹಾಗೂ ಕ್ರೀಡೆಯಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ದ್ವಿತೀಯ ಪಿಯುಸಿಯಲ್ಲಿ ಸರಕಾರಿ ಕಾಲೇಜುಗಳ ಪೈಕಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಇಲ್ಲಿ ಸುಮಾರು 890ಕ್ಕೂ ಅಧಿಕ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರತಿ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿ ಕೊಠಡಿಗಳ ಅಗತ್ಯತೆ ಸೇರಿದಂತೆ ಕೆಲವು ಮೂಲಭೂತ ಸೌಕರ್ಯಗಳು ಅಗತ್ಯವಿರುವ ಬಗ್ಗೆ ಕಾಲೇಜಿನ ಅಭಿವೃದ್ಧಿ ಸಮಿತಿಯು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ಬೇಡಿಕೆ ಮುಂದಿಟ್ಟಾಗ ಶಾಸಕರು ಅದಕ್ಕೆ ತಕ್ಷಣ ಸ್ಪಂದಿಸಿ ವಿವೇಕ ಯೋಜನೆಯಡಿ ಸುಮಾರು 12 ಕೊಠಡಿಗಳ ನಿರ್ಮಾಣಕ್ಕೆ 3 ಕೋಟಿಯ 60 ಸಾವಿರ ರೂ. ಅನುದಾನವನ್ನು ನೀಡಿದ್ದಾರೆ. ಅನುದಾನದ ಕೊರತೆಯಿಂದ ಅಪೂರ್ಣವಾಗಿ ಉಳಿದಿದ್ದ ಕಾಲೇಜಿನ ಎರಡು ಕೊಠಡಿಗಳ ಛಾವಣಿಗೆ 10 ಲಕ್ಷ ರೂ. ಹೆಚ್ಚುವರಿ ಅನುದಾನ ನೀಡಿದ್ದಾರೆ. ಇವುಗಳ ಶಿಲಾನ್ಯಾಸ ಕಾರ್ಯಕ್ರಮವನ್ನು ಜ.30ರಂದು ಬೆಳಗ್ಗೆ 10ಗಂಟೆಗೆ ಶಾಸಕರಾದ ಅಶೋಕ್ ಕುಮಾರ್ ರೈ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ, ಉಪ್ಪಿನಂಗಡಿ ರೋಟರಿ ಕ್ಲಬ್ನ ಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಭರತ್ ಬಿ.ಎಂ. ಭಾಗವಹಿಸಲಿದ್ದಾರೆ. ವಿಶೇಷ ಅಹ್ವಾನಿತರಾಗಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಹರೀಶ್ ಉಪಾಧ್ಯಾಯ, ರಾಜ್ಯ ದಾರಿಮಿ ಉಲೇಮಾ ಒಕ್ಕೂಟದ ಅಧ್ಯಕ್ಷರಾದ ಜನಾಬ್ ಎಸ್.ಬಿ. ದಾರಿಮಿ, ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು ವಂ.ಫಾ. ಅಬೆಲ್ ಲೋಬೋ ಭಾಗವಹಿಸಲಿದ್ದು, ಸರ್ವ ಧರ್ಮದ ಪ್ರಾರ್ಥನೆಯೊಂದಿಗೆ ಶಂಕು ಸ್ಥಾಪನೆ ನೆರವೇರಲಿದೆ. ಈ ಸಂದರ್ಭ ಪಿಡಬ್ಲ್ಯೂಡಿ ಕ್ಲಾಸ್ 1 ಗುತ್ತಿಗೆದಾರ ಅಬ್ದುಲ್ ರಝಾಕ್ ಕಂಪ ಭಾಗವಹಿಸಲಿದ್ದಾರೆ ಎಂದರು.

ವಿದ್ಯಾರ್ಥಿಗಳಿಗೆ ಅವಶ್ಯಕವಾಗಿ ಬೇಕಾಗಿರುವ ಸಿಇಟಿ ಹಾಗೂ ನೀಟ್ ತರಬೇತಿ ಸರಕಾರಿ ಕಾಲೇಜಾದ ನಮ್ಮ ಕಾಲೇಜಿನಲ್ಲಿ ಒದಗಿಸಬೇಕೆಂಬ ಉದ್ದೇಶದಿಂದ ಪೋಷಕರ ಹಾಗೂ ಅಭಿವೃದ್ಧಿ ಸಮಿತಿಯ ಸಹಕಾರದಿಂದ ಉತ್ತಮವಾಗಿರುವ ಖಾಸಗಿ ಸಂಸ್ಥೆಯೊಂದರ ಮೂಲಕ ಆರಂಭಿಸಲಾಗಿದೆ. ಈಗ ನಮ್ಮ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳು ಮಾತ್ರ ಇದ್ದು, ಕೊಠಡಿಗಳ ಲಭ್ಯತೆ ಆದ ಬಳಿಕ ಮನೋಶಾಸ್ತ್ರ ಸೇರಿದಂತೆ ಇನ್ನು ಮುಖ್ಯವಾಗಿರುವ ಕೆಲವು ವಿಭಾಗಗಳನ್ನು ಇಲ್ಲಿ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಅಝೀಝ್ ಬಸ್ತಿಕ್ಕಾರ್ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್ನ ಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಬ್ದುರ್ರಹ್ಮಾನ್ ಯುನಿಕ್, ಅನಿ ಮಿನೇಜಸ್, ನಝೀರ್ ಮಠ, ಇಬ್ರಾಹೀಂ ಕೆ., ನಾಗೇಶ್ ಪ್ರಭು, ಆದಂ ಕೊಪ್ಪಳ, ಕಾಲೇಜಿನ ಪ್ರಾಚಾರ್ಯರಾದ ಸುಧೀರ್ ಕುಮಾರ್ ಎಂ., ಹಿರಿಯ ಉಪನ್ಯಾಸಕ ಇಬ್ರಾಹೀಂ ಎಂ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here