ಬೆಂಗಳೂರು : ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಗಿರಾಕಿ ಅನ್ನೋದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ. ಅವರು ಈ ಹಿಂದಿನಿಂದಲೂ ಮಾಡಿದ ಆರೋಪಗಳು ಯಾವುದೂ ಸಾಬೀತಾಗಿಲ್ಲ, ಪ್ರಜ್ವಲ್ ರೇವಣ್ಣ ಸೆಕ್ಸ್ ಗೇಟ್ ಪ್ರಕರಣದಲ್ಲಿ ನನ್ನ ಹೆಸರು ಮುನ್ನಲೆಗೆ ತಂದರೆ ಇಡೀ ರಾಜ್ಯದ ಗಮನ ಸೆಳೆಯಬಹುದು ಎನ್ನುವ ಕಾರಣಕ್ಕೆ ಅವರು ಪದೇ ಪದೇ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಬರದುಕೊಂಡಿರುವ ಅವರು, “ಈ ಕೇಸಿನ ಹಿಂದೆ ಇರುವುದು ಬ್ಲಾಕ್ ಮೇಲ್ ಕಿಂಗ್ ಕುಮಾರಸ್ವಾಮಿ. ರಾಜಕಾರಣಿಗಳು, ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುವುದೇ ಅವರ ಕೆಲಸ. ಅವರಿಗೆ ದಿನಕ್ಕೊಮ್ಮೆ ನನ್ನ ಹೆಸರು ಎತ್ತದಿದ್ದರೆ ನಿದ್ದೆ ಬರಲ್ಲ. ಈಗಲೂ ನಾನು ಹೇಳುತ್ತಿದ್ದೇನೆ ಈ ಪ್ರಕರಣದ ಕಥಾನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲಾ ಕುಮಾರಸ್ವಾಮಿ ಅವರೇ” ಎಂದು ಹೇಳಿದ್ದಾರೆ.
” ರೇವಣ್ಣ ಅವರದು ಬೇರೆ ಕುಟುಂಬ ಅಂತ ಹಿಂದೆ ಅವರೇ ಹೇಳಿದ್ದರು. ಉಪ್ಪು ತಿಂದವನು ನೀರು ಕುಡಿಯಬೇಕು ಅಂತ ಕೂಡ ಹೇಳಿದ್ದರು, ಈಗ ಯಾಕೆ ಮತ್ತೆ ಹಿಟ್ ಅಂಡ್ ರನ್ ಮಾಡ್ತಿದ್ದಾರೆ? . ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ, ಈಗಲೇ ತೀರ್ಪು ಕೊಡುವುದಕ್ಕೆ ಕುಮಾರಸ್ವಾಮಿ ಅವರೇನು ಲಾಯರೋ? ಜಡ್ಜೋ? ಚರ್ಚೆ ಮಾಡಲು ಇನ್ನೂ ಸಮಯ ಇದೆ, ವಿಧಾನಸಭೆ ಅಧಿವೇಶನ ಇದೆ, ಎಲ್ಲಾ ತೆಗೆದುಕೊಂಡು ಬರಲಿ ಚರ್ಚೆ ಮಾಡೋಣ ” ಎಂದು ಸವಾಲು ಹಾಕಿದರು.