ಬೆಂಗಳೂರು: “ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ, ಸುದೀರ್ಘ ಚರ್ಚೆ ಬಳಿಕವೇ ನಿಗಮ, ಮಂಡಳಿಗಳಿಗೆ ನೇಮಕ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಕುಮಾರಪಾರ್ಕ್ ಸರ್ಕಾರಿ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ರ ಪ್ರತಿಕ್ರಿಯಿಸಿದ ಅವರು, “ಈ ನೇಮಕದ ಬಗ್ಗೆ ಸಿದ್ದರಾಮಯ್ಯ ಅವರು, ನಾನು ಹಾಗೂ ಪ್ರಧಾನ ಕಾರ್ಯದರ್ಶಿಗಳು ಕೂತು ಚರ್ಚೆ ಮಾಡಿದ್ದೇವೆ. ಎಲ್ಲರ ಅಭಿಪ್ರಾಯವನ್ನು ಪಡೆದಿದ್ದೇವೆ. ಕೆಲವರು ಇಂತಹವರಿಗೆ ಸ್ಥಾನ ನೀಡಬೇಕು ಎಂಬ ಪಟ್ಟಿ ಕೊಟ್ಟಿದ್ದಾರೆ. ಆ ಪತ್ರವನ್ನು ನಿಮ್ಮ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದರು.
ಮಂತ್ರಿ ಆಗಬೇಕು, ದೊಡ್ಡ ಮಂಡಳಿಗಳು ಸಿಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಎರಡು ವರ್ಷಗಳ ನಂತರ ಮತ್ತೆ ಬದಲಾವಣೆ ಆಗುತ್ತದೆ. ಅವಧಿ ಮುಗಿದ ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಪಕ್ಷ ಯಾವುದೇ ಹುದ್ದೆ ಕೊಟ್ಟರೂ ಸೇವೆ ಮಾಡಬೇಕು. ಯಾರೂ ಗಾಬರಿಯಾಗುವ ಅವಶ್ಯಕತೆಯಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಬ್ಲಾಕ್ ನಲ್ಲಿ ದುಡಿದಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುತ್ತೇವೆ ಎಂದು ತಿಳಿಸಿದರು.
ಇನ್ನೂ ನೂರಾರು ಕಾರ್ಯಕರ್ತರಿಗೆ ಅವಕಾಶ ನೀಡಲು ಹುದ್ದೆಗಳನ್ನು ಸೃಷ್ಟಿ ಮಾಡಿದ್ದೇವೆ. ಕಾರ್ಯಕರ್ತರಿಗೆ ಸ್ಥಳೀಯ ಮಟ್ಟದಲ್ಲಿ ಆಸ್ಪತ್ರೆ ಸಮಿತಿ, ಬಗರ್ ಹುಕುಂ ಸಾಗುವಳಿ ಸಮಿತಿ, ಆಶ್ರಯ ಸಮಿತಿ, ಮುನಿಸಿಪಾಲಿಟಿ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಅವಕಾಶ ನೀಡಲಾಗುವುದು ಎಂದರು.
ಈ ಬಾರಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಗೆಲ್ಲಲಿದೆ:
ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಮರು ಆಯ್ಕೆ ಮಾಡಿ ಎಂಬ ಶಾಮನೂರು ಶಿವಶಂಕರಪ್ಪನವರ ಹೇಳಿಕೆ ಬಗ್ಗೆ ಕೇಳಿದಾಗ “ಆ ವಿಚಾರ ನನಗೆ ಗೊತ್ತಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಕ್ಷೇತ್ರದಲ್ಲಿ ಗೆಲ್ಲುತ್ತದೆ. ಶಿವಮೊಗ್ಗದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲಲಿದ್ದಾರೆ” ಎಂದರು.