ಮಂಗಳೂರು, ಎ. 12: ನಗರದ ಹೊರವಲಯದ ಅಡ್ಯಾರ್‌ನ ಬೊಂಡ ಫ್ಯಾಕ್ಟರಿಯಿಂದ ಖರೀದಿಸಿ ಕುಡಿದ ಎಳನೀರಿನಿಂದ ಅಸ್ವಸ್ಥ ಗೊಂಡ ಪ್ರಕರಣಕ್ಕೆ ಸಂಬಂಧಿಸಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಶೀಘ್ರವೇ ವರದಿ ಬರಲಿದೆ. ಕಳೆದ ಸೋಮವಾರ ಖರೀದಿಸಿದ ಎಳನೀರು ಕುಡಿದ ಬಳಿಕ ಅಸ್ವಸ್ಥಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪ್ರಕರಣದ ಕುರಿತಂತೆ ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್. ಆರ್. ತಿಮ್ಮಯ್ಯ ಹೇಳಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಎ. 8ರಂದು ಅಡ್ಯಾರ್‌ನ ಫ್ಯಾಕ್ಟರಿಯಿಂದ ಎಳನೀರು ಕುಡಿದವರಲ್ಲಿ ಮಾತ್ರ ಅಸ್ವಸ್ಥಗೊಂಡಿದ್ದಾರೆ. ಒಂದು ಮನೆಯಲ್ಲಿ ನಾಲ್ಕು ಮಂದಿ ಕುಡಿದಿದ್ದರೆ ನಾಲ್ವರೂ ಅಸ್ವಸ್ಥರಾಗಿದ್ದು, ಕುಡಿಯದವರಿಗೆ ಏನೂ ಆಗಿಲ್ಲ. ಹಾಗಾಗಿ ಮೇಲ್ನೋಟಕ್ಕೆ ಎಳನೀರು ಕುಡಿದ ಬಳಿಕ ಸಂಭವಿಸಿದ ಘಟನೆ ಎಂಬುದಾಗಿ ಕಂಜು ಬಂದಿದೆ. ಆದರೆ ವರದಿ ಬಾರದೆ ಎಳನೀರೇ ಕಾರಣ ಎಂದು ಎಂದು ಕರಾರುವಕ್ಕಾಗಿ ಹೇಳಲಾಗದು. ಆ ದಿನ ಅಲ್ಲಿಂದ ಎಳನೀರು ಖರೀದಿಸಿ ಕೊಂಡು ಹೋಗಿ ಮನೆಯಲ್ಲಿ ತಡವಾಗಿ ಕುಡಿದ ಕಾರಣ ಅಥವಾ ಆ ದಿನದ ಬೊಂಡ ಜ್ಯೂಸ್ ತಯಾರಿಯ ಬ್ಯಾಚ್‌ನಲ್ಲಿ ಆಗಿರುವ ವ್ಯತ್ಯಾಸದಿಂದಲೂ ಆಗಿರುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ರೋಗಿಗಳ ಜತೆ ನಿರಂತರ ಭೇಟಿಯ ಮೂಲಕ ಈ ವಿಚಾರವನ್ನು ಕಂಡುಕೊಳ್ಳಲಾಗಿದೆ. ಉಳಿದಂತೆ ಪ್ರಯೋಗಾಲಯದ ವರದಿಯನ್ನು ಎದುರು ನೋಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ವಿವರ ನೀಡಿದರು.
ಎ. 10ರಂದು ನಮಗೆ ವಿಷಯ ತಿಳಿದಾಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸುಮಾರು 15 ಲೀಟರ್ ಎಳನೀರು ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಫ್ಯಾಕ್ಟರಿಯಲ್ಲಿ ಬಳಸುವ ನೀರಿನ ಮಾದರಿಯನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪ್ರಕರಣದಿಂದ ಅಸ್ವಸ್ಥಗೊಂಡು ಚಿಕಿತ್ಸೆ ಪಡೆದ ರೋಗಿಗಳ ರಕ್ತ ಮತ್ತು ಮಲದ ಮಾದರಿಯನ್ನು ಕೂಡಾ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ ಯಾರಿಗೂ ಕಾಲರಾ ಇಲ್ಲ ಎಂಬ ವರದಿ ಬಂದಿದೆ. ಬೇರೆ ಯಾವ ಮಾದರಿಯ ಬ್ಯಾಕ್ಟೀರಿಯಾದಿಂದ ಈ ಪ್ರಕರಣ ನಡೆದಿದೆ ಎಂಬ ಬಗ್ಗೆ ಪರೀಕ್ಷೆ ನಡೆಯುತ್ತಿದ್ದು, ಅದಕ್ಕೆ ಕನಿಷ್ಟ ಒಂದು ವಾರದ ಸಮಯ ಬೇಕಾಗಿದೆ ಎಂದರು.
ಅಸ್ವಸ್ಥಗೊಂಡ 138 ಮಂದಿಯಲ್ಲಿ ಮಂಗಳೂರು ನಗರದ 56 ಮಂದಿ, ಬಂಟ್ವಾಳದ 73, ಪುತ್ತೂರು 8, ಕಡಬದ ಒಬ್ಬರು ಸೇರಿದ್ದಾರೆ. ಇವರಲ್ಲಿ 84 ಮಂದಿ ಹೊರರೋಗಿಗಳಾಗಿ, 53 ಮಂದಿ ಹೊರರೋಗಿಗಳಾಗಿ ದಾಖಲಾಗಿದ್ದಾರೆ. 23 ಮಂದಿ ನಿನ್ನೆ ಸಂಜೆಯವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಯಾರೂ ತೀವ್ರತೆರನಾಗಿ ಅಸ್ವಸ್ಥಗೊಂಡಿಲ್ಲ. ಒಬ್ಬ ರೋಗಿ ಮಾತ್ರ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾವುದಾದರೂ ರಾಸಾಯನಿಕ ಬೆರಕೆ ಆಗಿರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ಕೆಮಿಕಲ್, ಬಯೋಕೆಮಿಸ್ಟ್ರಿ ಮತ್ತು ರೋಗಾಣುಗಳಿಂದ ಏನಾದರೂ ತೊಂದರೆ ಉಂಟಾಗಿರುವುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕಳೆದ ಸೋಮವಾರ ಬೊಂಡ ಖರೀದಿಸಿ ಕುಡಿದವರಲ್ಲಿ ವಾಂತಿ ಬೇಧಿ, ಹೊಟ್ಟೆನೋವು, ಜ್ವರ ಮೊದಲಾದ ರೋಗ ಲಕ್ಷಣಗಳು ಕಂಡು ಬಂದಿರುವ ಬಗ್ಗೆ ಎಲ್ಲಾ ಕಡೆಗಳಿಂದಲೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಆಸ್ಪತ್ರೆ, ಆರೋಗ್ಯ ಕೇಂದ್ರ ಮಾತ್ರವಲ್ಲದೆ, ಆಶಾ ಕಾರ್ಯಕರ್ತರ ಮೂಲಕವೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯ ಬೊಂಡ ಫ್ಯಾಕ್ಟರಿ ಹಾಗೂ ಫ್ಯಾಕ್ಟರಿಗೆ ಸಂಬಂಧಿಸಿದ ಇತರ ಔಟ್‌ಲೆಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ವಿವರ ನೀಡಿದರು.
ಗೋಷ್ಟಿಯಲ್ಲಿ ವೈದ್ಯಾಧಿಕಾರಿಗಳಾದ ಡಾ. ಸದಾಶಿವ ಶ್ಯಾನುಭಾಗ್, ಡಾ. ನವೀನ್ ಚಂದ್ರ ಕುಲಾಲ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತಪಾಸಣಾ ಅಧಿಕಾರಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.