ಸರ್ಕಾರ ಯಾವುದೇ ರೀತಿಯಲ್ಲೂ ಪರಿಶಿಷ್ಟ ಜಾತಿ/ಪಂಗಡಗಳ ಕಲ್ಯಾಣಕ್ಕೆ ಎಂದು ಮೀಸಲಿರಿಸಿದ ಹಣವನ್ನು ಇತರ ಜನ ಸಮುದಾಯಗಳ, ಇತರ ಉದ್ದೇಶಗಳಿಗೆ ಬಳಸುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಬೆಂಗಳೂರು: ಸರ್ಕಾರ ಯಾವುದೇ ರೀತಿಯಲ್ಲೂ ಪರಿಶಿಷ್ಟ ಜಾತಿ/ಪಂಗಡಗಳ ಕಲ್ಯಾಣಕ್ಕೆ ಎಂದು ಮೀಸಲಿರಿಸಿದ ಹಣವನ್ನು ಇತರ ಜನ ಸಮುದಾಯಗಳ, ಇತರ ಉದ್ದೇಶಗಳಿಗೆ ಬಳಸುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿಗಳು, ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿನ ಅನುದಾನಗಳನ್ನು ಇತರ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಕೆಲವರು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೆಲವು ಮಾಧ್ಯಮಗಳಲ್ಲೂ ಈ ಕುರಿತು ವರದಿಗಳಿವೆ. ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಿರಿಸಿದ ಅನುದಾನಗಳನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುತ್ತಿದ್ದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆ 2013ರ ಸೆಕ್ಷನ್ 7(ಡಿ)ಯನ್ನು ರದ್ದುಮಾಡಲು ಈಗಾಗಲೇ ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬಜೆಟ್‌ನಲ್ಲೂ ಈ ಬಗ್ಗೆ ಘೋಷಿಸಲಾಗಿದೆ. ಇದರ ಪರಿಣಾಮವಾಗಿ ಈ ಕೆಳಗಿನ ಇಲಾಖೆಗಳಿಗೆ ಅನುದಾನ ಹಂಚಿಕೆಯನ್ನು ಕಡಿತಗೊಳಿಸಿದ್ದು, ಅದನ್ನು ಈ ಬಾರಿ ಫಲಾನುಭವಿ ಆಧಾರಿತ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ. ಸೆಕ್ಷನ್ 7(ಡಿ) ಅಡಿಯಲ್ಲಿದ್ದ ಕಾರಣಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ರಸ್ತೆ, ಸೇತುವೆಗಳಿಗೆ ಬಳಸಲು ಅವಕಾಶವಿತ್ತು. ಇದರಿಂದ ಪರಿಶಿಷ್ಟ ಸಮುದಾಯಗಳಿಗೆ ಆಗುತ್ತಿದ್ದ ಸಮಸ್ಯೆಯನ್ನು ನಮ್ಮ ಸರ್ಕಾರ ನಿಲ್ಲಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: SCSP, TSP ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ; ದಲಿತರಿಗೆ ಸರ್ಕಾರದಿಂದ ದೊಡ್ಡ ಅನ್ಯಾಯ: ಬಿಜೆಪಿ ಪ್ರತಿಭಟನೆಯಲ್ಲಿ ಬೊಮ್ಮಾಯಿ
ಪ.ಜಾತಿ/ಪ.ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿ ಅನುದಾನ ಹಂಚಿಕೆ ಮಾಡಬೇಕಾಗಿದ್ದು, 2023-24ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿ ಒಟ್ಟು 34,294 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇದು ಶೇ.13 ಅಂದರೆ 4,031 ಕೋಟಿ ರೂ. ಹೆಚ್ಚಳವಾಗಿದೆ. ಸರ್ಕಾರವು ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯಡಿ ಮೀಸಲಿರಿಸಿದ ಒಟ್ಟು ಅನುದಾನದಲ್ಲಿ 11,144 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆಂದು ಒದಗಿಸಿದೆ. ಗೃಹ ಲಕ್ಷ್ಮಿ ಯೋಜನೆಗೆ ರೂ 5,075 ಕೋಟಿ, ಅನ್ನ ಭಾಗ್ಯಕ್ಕೆ ರೂ 2,779.97, ಗೃಹ ಜ್ಯೋತಿಗೆ ರೂ 2,410 ಕೋಟಿ, ಶಕ್ತಿ ಯೋಜನೆಗೆ ರೂ 812 ಕೋಟಿ ಮತ್ತು ಯುವ ನಿಧಿ ಯೋಜನೆಗೆ ರೂ 67.5 ಕೋಟಿ ನಿಗದಿಪಡಿಸಲಾಗಿತ್ತು. ಇದೀಗ ಇಷ್ಟೂ ಹಣವನ್ನು ಕಡ್ಡಾಯವಾಗಿ ಪ.ಜಾತಿ/ಪಂಗಡಗಳ ಕುಟುಂಬಗಳಿಗೆ ವಿನಿಯೋಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಧಿನಿಯಮ 2013ರ ಅನ್ವಯ ಪ.ಜಾತಿ/ಪ.ಪಂಗಡದವರಿಗೆ ನೇರವಾಗಿ ಪ್ರಯೋಜನವಾಗುವ ವೈಯಕ್ತಿಕ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ವಾಸಸ್ಥಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಲು ಅವಕಾಶವಿರುತ್ತದೆ. ಈ ಅವಕಾಶಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು ಹಾಗೂ ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಒತ್ತು ಕೊಡಲು ಉದ್ದೇಶಿಸಿದ್ದೇವೆ. ನಮ್ಮ ಸರ್ಕಾರವು ದಲಿತ, ದಮನಿತ ವರ್ಗಗಳಿಗೆ ನ್ಯಾಯಯುತವಾದ ಹಕ್ಕುಗಳನ್ನು ಈಡೇರಿಸಲು ಮೊದಲಿನಿಂದಲೂ ಬದ್ಧವಾಗಿದೆ.
2008ರಿಂದ 2013ರವರೆಗೆ ಆಡಳಿತ ನಡೆಸಿದ ಸರ್ಕಾರ ಎಸ್ ಸಿಪಿ/ಟಿಎಸ್‌ಪಿ ಯೋಜನೆಗಾಗಿ 22,261 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ಆದರೆ, 2013ರವರೆಗೆ ಆಡಳಿತ ನಡೆಸಿದ್ದ ನಮ್ಮ ಸರ್ಕಾರ 88,530 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ಈಗಲೂ ನಾವು 34,294 ಕೋಟಿ ರೂ.ಗಳನ್ನು ಒದಗಿಸಿಕೊಟ್ಟಿದ್ದೇವೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ 34,293 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ
ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮೀಸಲಿಟ್ಟ ನಂತರವೂ ನಮಗೆ 21-22 ಸಾವಿರ ಕೋಟಿ ರೂ.ಗಳಷ್ಟು ಅನುದಾನವು ಪ.ಜಾತಿ/ ಪ.ಪಂಗಡಗಳ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಲಭ್ಯವಿರಲಿದೆ. ಈ ಹಿಂದೆ ಆಡಳಿತ ನಡೆಸಿದ್ದ ಸರ್ಕಾರ ಲಭ್ಯವಿದ್ದ ಅನುದಾನಗಳಲ್ಲಿ ಸೆಕ್ಷನ್ 7(ಡಿ) ಅನ್ನು ದುರುಪಯೋಗಪಡಿಸಿಕೊಂಡು ಸಾವಿರಾರು ಕೋಟಿ ರೂ.ಗಳನ್ನು ರಸ್ತೆ, ಸೇತುವೆ ನಿರ್ಮಿಸಲು ಖರ್ಚು ಮಾಡಿದೆ. ಅದರಂತೆ, ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಅಧಿನಿಯಮವು ಜಾರಿಯಾದಾಗಿನಿಂದ ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ನೀರಾವರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಇತರೆ ಇಲಾಖೆಗಳ ಸಾಮಾನ್ಯ ಯೋಜನೆಗಳಲ್ಲಿ ಈ ಹಿಂದಿನಿಂದಲೂ ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಅನುದಾನನ್ನು ಹಂಚಿಕೆ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಈ ಕೆಳಗಿನ ಗ್ಯಾರಂಟಿ ಕಾರ್ಯಕ್ರಮಗಳು ಎಸ್ಸಿ/ಎಸ್‌ಟಿ ಜನರಿಗೆ ನೇರವಾಗಿ ಪ್ರಯೋಜನವಾಗುತ್ತಿರುವ ಹಿನ್ನೆಲೆಯಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಅಧಿನಿಯಮದ ಅನುಸಾರವಾಗಿ, ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಅಡಿ ಭಾಗಶಃ ಅನುದಾನ ಹಂಚಿಕೆ ಮಾಡಲಾಗಿದೆ. ಮೇಲ್ಕಂಡ ಐದು ಕಾರ್ಯಕ್ರಮಗಳಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಅಡಿಯಲ್ಲಿ ನೀಡಿರುವ ಅನುದಾನವನ್ನು ಎಸ್.ಸಿ/ಎಸ್.ಟಿ ಫಲಾನುಭವಿಗಳಿಗೆ ಮಾತ್ರ ಉಪಯೋಗಿಸಲು ಸೂಚಿಸಲಾಗಿದೆ ಮತ್ತು ಎಸ್.ಸಿ/ಎಸ್.ಟಿ ಫಲಾನುಭವಿಗಳ ನಿಖರ ಅಂಕಿ-ಅಂಶಗಳನ್ನು ಪಡೆದು ಅದರಂತೆ ಅನುದಾನವನ್ನು ಉಪಯೋಗಿಸುತ್ತಿರುವ ಬಗ್ಗೆ ನೋಡಲ್ ಏಜೆನ್ಸಿ ಮೂಲಕ ಪರಿಶೀಲಿಸಿ ಸೂಕ್ತ ಅಗತ್ಯ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ: ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗೆ ಹಣ ಕಡಿಮೆಯಾಗುತ್ತಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ರಾಜ್ಯದ ಸಾಲ ಮತ್ತು ಸಾಲದ ಮೇಲಿನ ಬಡ್ಡಿಯೂ ಒಂದು. ರಾಜ್ಯ ಸರ್ಕಾರ ಸಾಲಗಾರನಾಗಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ಅನುದಾನಗಳನ್ನು ಕೊಡದಿರುವುದೇ ಮುಖ್ಯ ಕಾರಣ, ಕೇಂದ್ರ ಸರ್ಕಾರ 2018-19ರಲ್ಲಿ 24.42 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿ 51,977 ಕೋಟಿ ರೂ.ಗಳಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ಕೊಟ್ಟಿತ್ತು. ಈ ವರ್ಷ ಕೇಂದ್ರದ ಬಜೆಟ್ 45.03 ಲಕ್ಷ ಕೋಟಿ ರೂ.ಗಳಷ್ಟಾಗಿದೆ. ಆದರೆ ರಾಜ್ಯಕ್ಕೆ ಬರಬಹುದೆಂದು ನಿರೀಕ್ಷಿಸಿರುವ ಅನುದಾನ 50,257 ಕೋಟಿ ರೂ.ಗಳು ಮಾತ್ರ. 2018ಕ್ಕೆ ಹೋಲಿಸಿದರೆ 2023ರಲ್ಲಿ 1 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ಬರಬೇಕಾಗಿತ್ತು. ನಮಗೆ ಅನುದಾನ ಕಡಿಮೆಯಾಗುತ್ತಿದೆ. ಅನಿವಾರ್ಯವಾಗಿ ನಾವು ಸಾಲ ಮಾಡಬೇಕಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಾಲದ ಮೇಲಿನ ಬಡ್ಡಿಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿಗೆ ಅನುದಾನಗಳು ಕಡಿಮೆಯಾಗುತ್ತಿವೆ. ಇಷ್ಟರ ನಡುವೆಯೂ ನಾವು ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ 4,031 ರೂ.ಗಳಷ್ಟು ಹೆಚ್ಚು ಖರ್ಚು ಮಾಡುತ್ತಿದ್ದೇವೆ. ಹಾಗಾಗಿ ಯಾವುದೆ ಸುಳ್ಳು ಸುದ್ದಿಗಳಿಗೆ ಕಿವಿ ಕೊಡದೇ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಎಂದು ಮನವಿ ಮಾಡಿಕೊಂಡಿದ್ದಾರೆ.