ಗ್ರಾಮೀಣ ಪ್ರದೇಶದ ವಸತಿ ರಹಿತರಿಗೆ ಮನೆ ನಿರ್ಮಿಸಲು ಪ್ರಧಾನ ಮಂತ್ರಿ ಗ್ರಾಮೀಣ ಆವಾಜ್ ಯೋಜನೆ (ಪಿಎಂಜಿಎಸ್‌ವೈ) ಯೋಜನೆಯಡಿ ಫಲಾನುಭವಿಗಳ ಪಟ್ಟಿಯನ್ನು ಒಂದು ವಾರದೊಳಗೆ ಅಂತಿಮಗೊಳಿಸಿ ಕಳುಹಿಸುವಂತೆ ಸಚಿವ ಜಮೀರ್ ಅಹಮದ್ ಖಾನ್ ಗ್ರಾಮಸಭೆಗಳಿಗೆ ಸೂಚಿಸಿದ್ದಾರೆ. ಬೆಂಗಳೂರು: ಗ್ರಾಮೀಣ ಪ್ರದೇಶದ ವಸತಿ ರಹಿತರಿಗೆ ಮನೆ ನಿರ್ಮಿಸಲು ಪ್ರಧಾನ ಮಂತ್ರಿ ಗ್ರಾಮೀಣ ಆವಾಜ್ ಯೋಜನೆ (ಪಿಎಂಜಿಎಸ್‌ವೈ) ಯೋಜನೆಯಡಿ ಫಲಾನುಭವಿಗಳ ಪಟ್ಟಿಯನ್ನು ಒಂದು ವಾರದೊಳಗೆ ಅಂತಿಮಗೊಳಿಸಿ ಕಳುಹಿಸುವಂತೆ ಸಚಿವ ಜಮೀರ್ ಅಹಮದ್ ಖಾನ್ ಗ್ರಾಮಸಭೆಗಳಿಗೆ ಸೂಚಿಸಿದ್ದಾರೆ.
‘ಕೇಂದ್ರದ ಯೋಜನೆಯಡಿ ರಾಜ್ಯಕ್ಕೆ 1.41 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದ್ದು, ಇದುವರೆಗೆ 63 ಸಾವಿರ ಮನೆಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ 78 ಸಾವಿರ ಮನೆಗಳನ್ನು ಆಯ್ಕೆ ಮಾಡಬೇಕಿದೆ. ಸಂಬಂಧಪಟ್ಟ ಶಾಸಕರು ಈ ಬಗ್ಗೆ ಗಮನಹರಿಸಿ ಕೂಡಲೇ ಗ್ರಾಮಸಭೆಗಳಿಂದ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲು ವೈಯಕ್ತಿಕ ಆಸಕ್ತಿ ವಹಿಸಬೇಕು’ ಎಂದು ಹೇಳಿದರು.
‘ಯೋಜನೆಯ ಫಲಾನುಭವಿಗಳ ಆಯ್ಕೆಗೆ ಈಗಾಗಲೇ ಎರಡು ಬಾರಿ ಗಡುವು ವಿಸ್ತರಿಸಿದ್ದರೂ, ಪಟ್ಟಿ ನೀಡಿಲ್ಲ. ಇದೀಗ ಪಟ್ಟಿ ಅಂತಿಮಗೊಳಿಸುವ ಗಡುವನ್ನು ಜುಲೈ 20ರವರೆಗೆ ವಿಸ್ತರಿಸಲಾಗಿದ್ದು, ಇದುವರೆಗೆ ಪಟ್ಟಿ ಅಂತಿಮಗೊಳಿಸದ ಶಾಸಕರು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಯೋಜನೆಯು ಕೇಂದ್ರಕ್ಕೆ ವಾಪಸ್ ಆಗುತ್ತದೆ’ ಎಂದು ತಿಳಿಸಿದರು.
‘ಗ್ರಾಮೀಣ ಪ್ರದೇಶದಲ್ಲಿ ವಸತಿ ರಹಿತರ ಪಟ್ಟಿ ಸಿದ್ಧಪಡಿಸಲಾಗಿದ್ದು, ಯೋಜನೆಗೆ ಅರ್ಹರಾದವರನ್ನು ಗುರುತಿಸಲಾಗಿದೆ. ಪಟ್ಟಿಯಲ್ಲಿ, ಹಂಚಿಕೆಯಾದ ಮನೆಗಳ ಸಂಖ್ಯೆಗೆ ಅನುಗುಣವಾಗಿ ಫಲಾನುಭವಿಗಳ ಸಂಖ್ಯೆಯನ್ನು ಆಯ್ಕೆ ಮಾಡಬೇಕು. ಶಾಸಕರು ಗ್ರಾಮಸಭೆಗಳಿಗೆ ಮಾಹಿತಿ ನೀಡಿ, ವಾರದೊಳಗೆ ಪಟ್ಟಿ ಅಂತಿಮಗೊಳಿಸಿದರೆ ರಾಜ್ಯದ ವಸತಿ ರಹಿತರಿಗೆ ಯೋಜನೆಯ ಲಾಭ ದೊರೆಯಲಿದೆ. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿ ನಡೆಯಲಿದೆ’ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
‘ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 60:40 ಅನುದಾನ ನೀಡಲಿದೆ. ಸಾಮಾನ್ಯ ವರ್ಗಕ್ಕೆ ಒಂದು ಲಕ್ಷದ ಮೂರು ಸಾವಿರ ರೂ. ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಒಂದು ಲಕ್ಷದ ಇಪ್ಪತ್ತು ಸಾವಿರ ರೂ. ಸಹಾಯಧನ ನೀಡಿ 150 ರಿಂದ 700 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಿಕೊಡಲಾಗುವುದು’ ಎಂದು ತಿಳಿಸಿದರು.
ಗ್ರಾಮೀಣ ವಸತಿ ಯೋಜನೆ ಹೊರತುಪಡಿಸಿ ನಗರ ಪ್ರದೇಶದ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯನ್ನು ಶಾಸಕರ ಸಮಿತಿ ಮಾಡಲಿದ್ದು, ನಗರ, ಗ್ರಾಮೀಣ ಸೇರಿದಂತೆ ವಿವಿಧ ಯೋಜನೆಗಳಲ್ಲಿ 2,90,878 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ. ಶಾಸಕರಿಗೂ ಮನವಿ ಮಾಡಲಾಗಿದೆ. ಶಾಸಕರು ಫಲಾನುಭವಿಗಳ ಆಯ್ಕೆ ಪಟ್ಟಿ ನೀಡಿದ ತಕ್ಷಣ ಹಂಚಿಕೆ ಮತ್ತಿತರ ಪ್ರಕ್ರಿಯೆ ನಡೆಸಲಾಗುವುದು ಎಂದು ಅವರು ತಿಳಿಸಿದರು.