ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಮಂಗಳವಾರ ಬಂಜಾರ ಸಮುದಾಯದ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಹಾವೇರಿ: ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಮಂಗಳವಾರ ಬಂಜಾರ ಸಮುದಾಯದ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.
ಪರಿಶಿಷ್ಟ ಜಾತಿ ಒಳಮೀಸಲಾತಿ ಹಂಚಿಕೆಗೆ ಬಂಜಾರ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು. ಇದೀಗ, ಸ್ವಾಮೀಜಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಾವೇರಿಯ ಶಿಗ್ಗಾಂವ್ ಪಟ್ಟಣದಲ್ಲಿ ಗುಂಡೂರು ಗ್ರಾಮದ ತಿಪ್ಪೇಸ್ವಾಮಿ ಎನ್ನುವ ಸ್ವಾಮೀಜಿಯ ನೇತೃತ್ವದಲ್ಲಿ ಬಂಜಾರ ಸಮುದಾಯ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ, ಅಂಬೇಡ್ಕರ್ ಪ್ರತಿಮೆ ಬಳಿ ಸ್ವಾಮೀಜಿ ನೇಣು ಬಿಗಿದುಕೊಳ್ಳಲು ಯತ್ನಿಸಿದರು.
ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಬಂಜಾರ ಸಮುದಾಯದವರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಹಲವು ಕುಗ್ರಾಮಗಳಲ್ಲಿನ ನಿವಾಸಿಗಳು ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಮಂಗಳವಾರವೂ ಶಿಗ್ಗಾಂವಿಯಲ್ಲಿ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದರು.
ಒಳಮೀಸಲಾತಿಗೆ ವಿರೋಧಿಸಿದ ಸ್ವಾಮೀಜಿ ಸೇರಿದಂತೆ ಸಮುದಾಯದ ನಾಯಕರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ಮುಗಿದ ಬಳಿಕ ತಿಪ್ಪೇಸ್ವಾಮಿ ಅವರು ಅಂಬೇಡ್ಕರ್ ಪ್ರತಿಮೆಯ ಮುಂದಿನ ಮೆಟ್ಟಿಲುಗಳ ಮೇಲೆ ಹತ್ತಿ, ಮಾಲೆ ಹಾಕುವ ನೆಪದಲ್ಲಿ ಮೆಟ್ಟಿಲಿನ ‘ಗ್ರಿಲ್’ಗೆ ನೇಣು ಹಾಕಿಕೊಳ್ಳಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಸಮುದಾಯವರು ಸ್ವಾಮೀಜಿಗಳನ್ನು ನಿಯಂತ್ರಿಸಿ ಆತ್ಮಹತ್ಯೆ ಯತ್ನ ವಿಫಲಗೊಳ್ಳುವಂತೆ ಮಾಡಿದರು.
ಇದೀಗ ಸ್ವಾಮೀಜಿಯವರ ಆರೋಗ್ಯ ಸ್ಥಿರವಾಗಿದ್ದು, ಪ್ರತಿಭಟನೆ ವೇಳೆ ಇಂತಹ ಯತ್ನಗಳನ್ನು ನಡೆಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಪ್ರತಿಭಟನಾಕಾರರು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿ, ಹೊಸ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.
ಗುಂಡೂರು ತಾಂಡಾದ ರಾಜು ನಾಯಕ್ ಮಾತನಾಡಿ, ಒಳಮೀಸಲಾತಿಯಿಂದಾಗಿ ಬಂಜಾರ, ಕೊರಮ, ಕುರಜ, ಭೋವಿ ಸಮುದಾಯಗಳಲ್ಲಿ ಅಸಮಾನತೆ ಉಂಟಾಗಿದೆ ಎಂದು ಹೇಳಿದ್ದಾರೆ.