ಬೆಂಗಳೂರು: ಗಂಭೀರ ಶ್ವಾಸಕೋಶ ಕಾಯಿಲೆಯಿಂದ ಹಲವು ವರ್ಷಗಳಿಂದ ಬಳಲುತ್ತಿದ್ದ ಕನ್ನಡದ ಕಿರುತೆರೆ ನಟಿ ರಶ್ಮಿ ಲೀಲಾ ಸೋಮವಾರ ನಿಧನರಾಗಿದ್ದಾರೆ. ಪಲ್ಮನರಿ ಫೈಬ್ರೋಸಿಸ್ನಿಂದ ಬಳಲುತ್ತಿದ್ದ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೂಕ್ತ ದಾನಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಲಂಗ್ ಟ್ರಾನ್ಸ್ಪ್ಲಾಂಟ್ ಕೂಡ ಮಾಡಲಾಗಿತ್ತು ಎನ್ನಲಾಗಿದೆ. ಶಸ್ತ್ರಚಿಕಿತ್ಸೆಯ ನಂತರವೂ ವೈದ್ಯಕೀಯ ಚಿಕಿತ್ಸೆ ಮುಂದುವರಿದಿದ್ದರೂ ಆರೋಗ್ಯ ಸ್ಥಿತಿ ಹದಗೆಟ್ಟು ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಈ ದುಃಖದ ಸುದ್ದಿಯನ್ನು ಅವರ ಪತಿ ಸಾರಕ್ಕಿ ಮಂಜು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಳಗ್ಗೆ ಹೃದಯದ ಬಡಿತ ತೀವ್ರ ಇಳಿಮುಖವಾಗುತ್ತಿದೆ ಎಂದು ಭಾವನಾತ್ಮಕ ಪೋಸ್ಟ್ ಮಾಡಿ, ಒಮ್ಮೆಯಾದರೂ ಪ್ರಾರ್ಥಿಸಿ ಜೀವ ಉಳಿಯಲಿ ಎಂದು ಮನವಿ ಮಾಡಿಕೊಂಡಿದ್ದರು. ಕೆಲವೇ ಗಂಟೆಗಳಲ್ಲಿ “ನಮ್ಮ ಪ್ರಾಣ ಹೊರಟು ಹೋಯಿತು” ಎಂದು ಮತ್ತೊಂದು ಪೋಸ್ಟ್ ಮೂಲಕ ರಶ್ಮಿ ಲೀಲಾ ನಿಧನದ ವಿಚಾರ ತಿಳಿಸಿದ್ದಾರೆ.
2019ರಿಂದಲೇ ಪಲ್ಮನರಿ ಫೈಬ್ರೋಸಿಸ್ನಿಂದ ಬಳಲುತ್ತಿದ್ದ ರಶ್ಮಿ ಲೀಲಾ ಅವರಿಗೆ ಕಳೆದ ಫೆಬ್ರವರಿಯಲ್ಲಿ ಲಂಗ್ ಟ್ರಾನ್ಸ್ಪ್ಲಾಂಟ್ ಮಾಡಲಾಗಿತ್ತು. ಚಿಕಿತ್ಸೆಗಾಗಿ ಸುಮಾರು 19 ಲಕ್ಷ ರೂಪಾಯಿಗಳ ಅಗತ್ಯವಿದೆ ಎಂದು ಕಳೆದ ಆಗಸ್ಟ್ನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಆರ್ಥಿಕ ಸಹಾಯವೂ ಕೋರಿದ್ದರು.
ರಶ್ಮಿ ಲೀಲಾ ಅವರ ನಿಧನದಿಂದ ಕನ್ನಡ ಕಿರುತೆರೆ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಅಭಿಮಾನಿಗಳು ಮತ್ತು ಸಹ ಕಲಾವಿದರು ಸಂತಾಪ ಸೂಚಿಸುತ್ತಿದ್ದಾರೆ.
