ಕನ್ನಡ ಕಡೆಗಣಿಸಿದ ನಗರದ ಖಾಸಗಿ ಶಾಲೆ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಂಗಳವಾರ ಆಗ್ರಹಿಸಿದ್ದಾರೆ. ಬೆಂಗಳೂರು: ಕನ್ನಡ ಕಡೆಗಣಿಸಿದ ನಗರದ ಖಾಸಗಿ ಶಾಲೆ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಂಗಳವಾರ ಆಗ್ರಹಿಸಿದ್ದಾರೆ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕನ್ನಡ ಭಾಷೆ ಕಡಗಣನೆ ಅಸ್ಮಿತೆಗೆ ಸಂಬಂಧಿಸಿದ ಸಂಗತಿಯಾಗಿರುವುದರಿಂದ ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದ್ದಾರೆ.
ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದು ನೆಲೆಸಿರುವ ಕನ್ನಡೇತರ ಪಾಲಕರು, ತಮ್ಮ ಮಕ್ಕಳಿಗೆ ಕನ್ನಡ ಬೋಧನೆ ಅಗತ್ಯವಿಲ್ಲವೆಂದು ಶಾಲಾ ಆಡಳಿತ ಮಂಡಳಿಗೆ ತಿಳಿಸಿರುವುದರಿಂದ ಕನ್ನಡ ಬೋಧನೆ ಕೈಬಿಡಲು ಶಾಲೆ ಮುಂದಾಗಿದೆ ಎನ್ನಲಾಗಿದೆ. ಇದು ಕನ್ನಡ ನಾಡು-ನುಡಿಗೆ ಹಾಗೂ ಕನ್ನಡ ಭಾಷೆಯ ಅಸ್ಮಿತೆಗೆ ಎಸಗುವ ಅಪಚಾರವಾಗುತ್ತದೆ. ಯಾವುದೇ ರಾಜ್ಯದ, ಯಾವುದೇ ಭಾಷೆಯ ಜನ ನಮ್ಮ ರಾಜ್ಯದಲ್ಲಿ ವಾಸಿಸಲು ಸಂವಿಧಾನಾತ್ಮಕ ಹಕ್ಕಿದೆ. ಆದರೆ, ತಾವು ವಾಸಿಸುವ ನೆಲದ ಭಾಷೆಯ ಬಗ್ಗೆ ಪ್ರಾಥಮಿಕ ತಿಳುವಳಿಕೆಯಾದರೂ ಇರಬೇಕಾದದ್ದು ಅವಶ್ಯ’ ಎಂದು ತಿಳಿಸಿದ್ದಾರೆ.
‘ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಭಾವನೆಗಳನ್ನು ಗೌರವಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ತಾವು ನೆಲೆಸಿದ ನೆಲದ ಭಾಷೆಯನ್ನು ವ್ಯಾವಹಾರಿಕವಾಗಿ ಬಳಸುವಷ್ಟು ಕಲಿಯಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಹಾಗಾಗಿ, ಕರ್ನಾಟಕದಲ್ಲಿರುವ ಪ್ರತಿಯೊಂದು ಶಾಲೆಯೂ ಕನ್ನಡ ಭಾಷೆಯನ್ನು ಬೋಧಿಸಬೇಕಾದದ್ದು ಅವುಗಳ ಆದ್ಯತೆಯಾಗಿರಬೇಕು. ಇದರಿಂದ ಹಿಂದೆ ಸರಿಯುವ ಅಥವಾ ಇದರಿಂದ ತಪ್ಪಿಸಿಕೊಳ್ಳಲು ಒಳದಾರಿ ಹುಡುಕುವ ಕ್ರಮಗಳಿಗೆ ನಾವು ಆಸ್ಪದ ಕೊಡಬಾರದು.
‘ದ್ವಿತೀಯ ಭಾಷೆಯಾಗಿ ಕನ್ನಡ ಕಲಿಸುವ ನಿಯಮಗಳಲ್ಲಿ ಯಾವುದೇ ಕಾರಣಕ್ಕೂ ಸಡಿಲಿಕೆ ಅಥವಾ ವಿನಾಯಿತಿ ನೀಡಬಾರದು. ಇದಕ್ಕೆ ವ್ಯತಿರಿಕ್ತವಾಗಿ ಶಿಕ್ಷಣ ಇಲಾಖೆಯ ಮೇಲೆ ಇಂತಹ ಶಾಲೆಗಳು ಒತ್ತಡ ತರಲು ಹಾಗೂ ಕಾನೂನು ಹೋರಾಟ ಮಾಡಲು ಸಿದ್ಧತೆ ನಡೆಸಿರುವುದನ್ನು ತಾವು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದ್ದಾರೆ.