Home Uncategorized ಕರವೇ ನಾರಾಯಣಗೌಡ ಸೇರಿ 29 ಕಾರ್ಯಕರ್ತರ ಬಿಡುಗಡೆಗೆ ಜಾಮೀನು ಮಂಜೂರು

ಕರವೇ ನಾರಾಯಣಗೌಡ ಸೇರಿ 29 ಕಾರ್ಯಕರ್ತರ ಬಿಡುಗಡೆಗೆ ಜಾಮೀನು ಮಂಜೂರು

30
0

ಬೆಂಗಳೂರು: ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಶನಿವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶ ನೀಡಿದೆ.

ಡಿಸೆಂಬರ್ 27ರಂದು ನಗರದಲ್ಲಿ ಕನ್ನಡ ನಾಮಫಲಕಗಳಿಗೆ ಆಗ್ರಹಿಸಿ ನಡೆಸಲಾದ ಚಳವಳಿಗೆ ಸಂಬಂಧಿಸಿ ಬಂಧಿತರಾದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಜನರನ್ನು ದೇವನಹಳ್ಳಿಯಲ್ಲಿ ನ್ಯಾಯಾಧೀಶರ ಮುಂದೆ ಡಿ.28ರಂದು ಹಾಜರುಪಡಿಸಿದ್ದರು. ನಾರಾಯಣಗೌಡರು ಸೇರಿದಂತೆ ಎಲ್ಲರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.

ನಂತರ ಜಾಮೀನು ಕೋರಿ ನಾರಾಯಣಗೌಡ ಅವರು ಜನವರಿ 2ರಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ತೀರ್ಪುನ್ನು ಜನವರಿ 6ಕ್ಕೆ ಕಾಯ್ದಿರಿಸಿತ್ತು. ಈ ಹಿನ್ನೆಲೆ ಶನಿವಾರ ಜಾಮೀನು ಬಗ್ಗೆ ಆದೇಶ ಪ್ರಕಟಿಸಿದ್ದು, ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ 29 ಕಾರ್ಯಕರ್ತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶ ನೀಡಿದೆ.

ಕರವೇ ನಾರಾಯಣ ಗೌಡ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಹೆದ್ದಾರಿ ತಡೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಆರೋಪಗಳಡಿಯಲ್ಲಿ ಪ್ರಕರಣವನ್ನು ನಾರಾಯಣ ಗೌಡ ಸೇರಿ ಸಂಘಟನೆಯ ಇನ್ನಿತರ ಕಾರ್ಯಕರ್ತರ ಮೇಲೆ ದಾಖಲು ಮಾಡಿಕೊಂಡು ನಾರಾಯಣ ಗೌಡರ ಜತೆ 29 ಮಂದಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿತ್ತು. ಈಗ ಈ ಎಲ್ಲಾ ಪ್ರಕರಣಗಳ ಆಲಿಸಿ ನ್ಯಾಯಾಲಯ ಜಾಮೀನಿನ ಮೇಲೆ ಕರವೇ ಅಧ್ಯಕ್ಷ ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದೆ.

LEAVE A REPLY

Please enter your comment!
Please enter your name here