ಹೊಸದಿಲ್ಲಿ: ಕರ್ನಾಟಕದಲ್ಲಿರುವ ಅತೀವ ಸಂಕಷ್ಟವನ್ನು ಪರಿಗಣಿಸಿ ಕೇಂದ್ರಕ್ಕೆ ರೂ 35.162 ಕೋಟಿ ಬರಪರಿಹಾರ ಬಿಡುಗಡೆಗೊಳಿಸುವಂತೆ ಕೇಂದ್ರಕ್ಕೆ ಸೂಚಿಸಬೇಕೆಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯಗಳು ಅನುದಾನ ಬಿಡುಗಡೆ ವಿಚಾರದಲ್ಲಿ ಜಟಾಪಟಿ ನಡೆಸದೇ ಇರಲಿ ಎಂದು ಹೇಳಿತು. ಎಲ್ಲಾ ವಿಚಾರಕ್ಕೂ ರಾಜ್ಯಗಳು ನಮ್ಮ ಹತ್ತಿರ ಬರಬೇಕೇ ಎಂದೂ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಅನುದಾನ ಬಿಡುಗಡೆಗೆ ಕೋರಿ ವಿವಿಧ ರಾಜ್ಯ ಸರ್ಕಾರಗಳು ಅರ್ಜಿ ಸಲ್ಲಿಸುತ್ತಿರುವ ವಿಚಾರವನ್ನು ಗಣನೆಗೆ ತೆಗೆದುಕೊಂಡಿರುವುದಾಗಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ಹೇಳಿದೆ.
ಈ ವಿಚಾರ ಪರಿಹಾರಕ್ಕೆ ಕೇಂದ್ರಕ್ಕೆ ಸಮಯಾವಕಾಶ ನೀಡಬೇಕೆಂದು ಕೇಂದ್ರ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದರು. ಇಂತಹ ಅರ್ಜಿ ಸಲ್ಲಿಸುವ ಪರಿಪಾಠ ರಾಜ್ಯಗಳಲ್ಲಿ ಹೆಚ್ಚುತ್ತಿದೆ ಎಂದೂ ಮೆಹ್ತಾ ಹೇಳಿದರಲ್ಲದೆ ಯಾರಾದರೂ ಯಾವುದಾದರೂ ಒಂದು ಹಂತದಲ್ಲಿ ಮಾತನಾಡಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು ಎಂದೂ ಅವರು ಹೇಳಿದರು.
ಅನುದಾನ ಬಿಡುಗಡೆ ವಿಚಾರದ ನಿರ್ಧಾರ ಒಂದು ತಿಂಗಳೊಳಗೆ ಅಂದರೆ ಡಿಸೆಂಬರ್ ಒಳಗೆ ತೆಗೆದುಕೊಳ್ಳಬೇಕಾಗಿತ್ತು ಆದರೆ ಕೋರ್ಟ್ ಹಸ್ತಕ್ಷೇಪದಿಂದ ಸಮಸ್ಯೆ ಪರಿಹಾರವಾಗಬಹುದೆಂಬ ನಿರೀಕ್ಷೆಯಿದೆ ಎಂದು ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಹೇಳಿದರು.