Home Uncategorized ಕರ್ನಾಟಕವು ತಂತ್ರಜ್ಞಾನ ಹಾಗೂ ಜ್ಞಾನಾಧಾರಿತ ಉದ್ಯಮಗಳ ಮೊದಲ ಆಯ್ಕೆ: ಸಿಎಂ ಸಿದ್ದರಾಮಯ್ಯ

ಕರ್ನಾಟಕವು ತಂತ್ರಜ್ಞಾನ ಹಾಗೂ ಜ್ಞಾನಾಧಾರಿತ ಉದ್ಯಮಗಳ ಮೊದಲ ಆಯ್ಕೆ: ಸಿಎಂ ಸಿದ್ದರಾಮಯ್ಯ

25
0

ಬೆಂಗಳೂರು: ಪ್ರತಿಭಾನ್ವಿತ ಉದ್ಯೋಗಿಗಳು ಹಾಗೂ ಕೌಶಲಯುಕ್ತ ಮಾನವ ಸಂಪನ್ಮೂಲ ಹೇರಳವಾಗಿರುವ ಕರ್ನಾಟಕವು ಸಹಜವಾಗಿಯೆ ತಂತ್ರಜ್ಞಾನ ಹಾಗೂ ಜ್ಞಾನಾಧಾರಿತ ಉದ್ಯಮಗಳ ಮೊದಲ ಆಯ್ಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಶುಕ್ರವಾರ ದೇವನಹಳ್ಳಿ ಸಮೀಪದ ಬೆಂಗಳೂರು ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‍ನಲ್ಲಿ ‘ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ’ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ‘ಬೋಯಿಂಗ್ ಸುಕನ್ಯಾ ಕಾರ್ಯಕ್ರಮ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೋಯಿಂಗ್ ಸಂಸ್ಥೆಯ 43 ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಿರುವ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕೇಂದ್ರ ಹಾಗೂ ವಿಮಾನ ಯಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ಬೋಯಿಂಗ್ ಸುಕನ್ಯಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ ಎಂದು ಅವರು ಹೇಳಿದರು.

ಈ ಸಂಸ್ಥೆಯ ಉದ್ಘಾಟನೆಯೊಂದಿಗೆ ತಂತ್ರಜ್ಞಾನದ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಮುಕುಟಕ್ಕೆ ಹೊಸದೊಂದು ಮಣಿ ಸೇರ್ಪಡೆಯಾದಂತಾಗಿದೆ. ಕರ್ನಾಟಕ ವಿಶ್ವದಲ್ಲಿಯೆ 4ನೆ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದೆ. ಭಾರತದ ನಾವಿನ್ಯತಾ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ ಹಾಗೂ ದೇಶದ ಒಟ್ಟಾರೆ ರಫ್ತಿನಲ್ಲಿಯೂ ಮುಂಚೂಣಿಯಲ್ಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಫಾರ್ಚೂನ್ 500 ಕಂಪೆನಿಗಳಲ್ಲಿ 400ಕ್ಕೂ ಹೆಚ್ಚು ಕಂಪೆನಿಗಳ ನೆಲೆಯಾಗಿರುವ ನಮ್ಮ ರಾಜ್ಯವು, ಸಂಶೋಧನೆ ಮತ್ತು ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿರುವುದಲ್ಲದೆ, ಸ್ಟಾರ್ಟಪ್ ರಾಜಧಾನಿ ಎಂಬ ಕೀರ್ತಿಗೂ ಭಾಜನವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕರ್ನಾಟಕವು ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಿಸಲು ನಮ್ಮ ಸರಕಾರ ಹೊಂದಿರುವ ಬದ್ಧತೆಯನ್ನು ಪುನರುಚ್ಛರಿಸಬಯಸುತ್ತೇನೆ. ಈ ನಿಟ್ಟಿನಲ್ಲಿ ವಿವಿಧ ವಲಯಗಳಿಗೆ ನಿರ್ದಿಷ್ಟ ನೀತಿ ಹಾಗೂ ಕೈಗಾರಿಕಾ ಸ್ನೇಹಿ ನೀತಿಗಳನ್ನು ರಾಜ್ಯ ಸರಕಾರವು ಜಾರಿಗೊಳಿಸಿದೆ ಎಂದು ಅವರು ಹೇಳಿದರು.

ಬೋಯಿಂಗ್ ಸಂಸ್ಥೆಯು ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಈ ಪ್ರದೇಶವನ್ನು ಆಯ್ಕೆ ಮಾಡಿರುವುದು ಅತ್ಯಂತ ಸಂತೋಷ ನೀಡಿದೆ. ಈ ಭಾಗವು ರಾಜ್ಯದ ಕೈಗಾರಿಕಾ ಅಭಿವೃದ್ಧಿಯಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಲು ಮುನ್ನುಡಿ ಬರೆದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕವು ದೇಶದ ಏರೋಸ್ಪೇಸ್ ವಲಯದಲ್ಲಿ ಪ್ರಾಬಲ್ಯವನ್ನು ಸಾಧಿಸಿದ್ದು, ಏರೋಸ್ಪೇಸ್ ಮತ್ತು ಡಿಫೆನ್ಸ್ ರಫ್ತಿನ ಶೇ.65 ರಷ್ಟು ಪಾಲನ್ನು ಹೊಂದಿದೆ. ಬೋಯಿಂಗ್ ನ ಈ ಹೊಸ ಉಪಕ್ರಮದಿಂದಾಗಿ ಸ್ಥಳೀಯ ಪ್ರತಿಭಾವಂತರಿಗೆ ಜಾಗತಿಕ ಮಟ್ಟದ ಯೋಜನೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ದೊರೆಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಎಲ್ಲರ ಒಳಗೊಳ್ಳುವಿಕೆ ಹಾಗೂ ಎಲ್ಲರಿಗೂ ತಂತ್ರಜ್ಞಾನದ ಲಾಭ ದೊರಕುವಂತಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರಕಾರ ಆದ್ಯತೆ ನೀಡಿದೆ. ಮಹಿಳೆಯರ ಅಭ್ಯುದಯ ಹಾಗೂ ಸಮಾಜಕ್ಕೆ ಅವರ ಅಮೂಲ್ಯ ಕೊಡುಗೆ ನೀಡುವ ನಿಟ್ಟಿನಲ್ಲಿ ನಮ್ಮ ಸರಕಾರ ಸದಾ ಬೆಂಬಲ ನೀಡುತ್ತಾ ಬಂದಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here