Home Uncategorized ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯಿಂದ ಅಮೆರಿಕ ಮೂಲದ ಕನ್ನಡಿಗ ವೈದ್ಯರಿಗೆ ಸನ್ಮಾನ

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯಿಂದ ಅಮೆರಿಕ ಮೂಲದ ಕನ್ನಡಿಗ ವೈದ್ಯರಿಗೆ ಸನ್ಮಾನ

22
0

ಉಡುಪಿ: ಬೆಂಗಳೂರಿನ ಕರ್ನಾಟಕದ ಸರಕಾರದ ಅನಿವಾಸಿ ಭಾರತೀಯ ಸಮಿತಿಯ ವತಿಯಿಂದ ಅಮೆರಿಕಾ ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿರುವ ಕರ್ನಾಟಕ ಮೂಲದ ವೈದ್ಯರನ್ನು ಹಾಗೂ ಕರ್ನಾಟಕ ಮೂಲದ ಅಮೇರಿಕನ್ ಅಸೋಸಿಯೇಷನ್ ಆಫ್ ಫಿಸಿಷಿಯನ್ಸ್ ಆಫ್ ಇಂಡಿಯನ್ (ಎಎಪಿಐ) ಸಂಸ್ಥೆಯ ಪದಾಧಿಕಾರಿಗಳನ್ನು ಶನಿವಾರ ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣ ದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಮಾತನಾಡಿ, ವಿದೇಶಗಳಲ್ಲಿ ಉದ್ಯೋಗ ವನ್ನರಸಿ ಹೋಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದರೊಂದಿಗೆ ದೇಶಕ್ಕೆ ಹೆಸರು ತಂದಿದ್ದಾರೆ. ಇವರು ಇಂದು ನಮ್ಮೊಂದಿಗೆ ಇರುವುದು ಹೆಗ್ಗಳಿಕೆಯ ವಿಷಯ ಎಂದರು.

ಭಾರತೀಯರು ಯಾವುದೇ ದೇಶದಲ್ಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ದೇಶದ ಹಿರಿಮೆಯನ್ನು ಇಡೀ ಪ್ರಪಂಚಕ್ಕೆ ಸಾರಿ ಹೇಳುತ್ತಾರೆ. ನಮ್ಮ ಮಾತೃಭೂಮಿಯ ಬೇರುಗಳೊಂದಿಗೆ ಎಂದಿಗೂ ಸಂಪರ್ಕ ಕಳೆದುಕೊಳ್ಳುವುದಿಲ್ಲ. ವಿದೇಶದಲ್ಲಿದ್ದರೂ ಸಹ ತಮ್ಮ ತಾಯ್ನಾಡಿನ ಬಗ್ಗೆ ಇಟ್ಟಿರುವ ಪ್ರೀತಿ ಸದಾ ಸ್ಮರಿಸುವಂಥದ್ದು ಎಂದರು.

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಈ ಆಧುನಿಕ ಯುಗ ದಲ್ಲಿ ಇಡೀ ವಿಶ್ವವೇ ಒಂದು ಪುಟ್ಟಗ್ರಾಮವಾಗಿದೆ. ಉದ್ಯೋಗಗಳನ್ನರಸಿ ವಿದೇಶಗಳಿಗೆ ಹೋಗುವುದು ಸರ್ವೆಸಾಮಾನ್ಯವಾಗಿದೆ. ಅನಿವಾಸಿ ಭಾರತೀಯರು ಭಾರತದ ಶಕ್ತಿ, ಸಾಮರ್ಥ್ಯ ಗುಣಲಕ್ಷಣಗಳನ್ನು ಪ್ರತಿನಿಧಿಸಿ ವಿಶ್ವದೆಲ್ಲೆಡೆ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅನಿವಾಸಿ ಭಾರತೀಯರು ತಾಯ್ನಾಡಿನ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಅನಿವಾಸಿ ಭಾರತೀಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ಬೇರೆ ದೇಶ ನಮ್ಮ ಕರ್ಮಭೂಮಿ ಆಗಿದ್ದರೂ ನಮ್ಮ ರಾಷ್ಟ್ರವನ್ನು ಪ್ರೀತಿಸುತ್ತೇವೆ. ರಾಷ್ಟ್ರ ಪ್ರೇಮವನ್ನು ಹಾಗೂ ಬಾಂಧವ್ಯವನ್ನು ಎಂದೂ ಮರೆಯುವುದಿಲ್ಲ ಎಂದರು.

ಅನಿವಾಸಿ ಭಾರತೀಯ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಲಕ್ಷ್ಮಮ್ಮ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here