ಬೆಳ್ತಂಗಡಿ:
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಕೆಲ ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಜಿಗಿಯುತ್ತಿದ್ದಂತೆ, ಬಿಜೆಪಿಯಲ್ಲಿ ಕೆಲವು ನಾಯಕರು ಬೇಸತ್ತಿದ್ದಾರೆ ಮತ್ತು ಪಕ್ಷವು ಈಗ ‘ಒಡೆದ ಮನೆ’ಯಾಗಿದೆ ಎಂದು ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಶನಿವಾರ ಹೇಳಿದ್ದಾರೆ.
ಬಿಜೆಪಿ ಏನೇ ಮಾಡಿದರೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ತರುವಂತೆ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದೇನೆ. ಬಿಜೆಪಿಯ ಕೆಲವರೂ ಬಿಜೆಪಿಯಿಂದ ಬೇಸತ್ತಿದ್ದಾರೆ. ಈಗ ಬಿಜೆಪಿ ಒಡೆದ ಮನೆಯಾಗಿದೆ ಎಂದು ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ವಿಧಾನಸಭೆ ಚುನಾವಣೆಗೆ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲವು ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು.
ಆರು ಬಾರಿ ಬಿಜೆಪಿ ಶಾಸಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ ನಂತರ ಪಕ್ಷವನ್ನು ತೊರೆದರು. ಪ್ರಮುಖ ಲಿಂಗಾಯತ ನಾಯಕ ಶೆಟ್ಟರ್ ನಂತರ ಕಾಂಗ್ರೆಸ್ ಸೇರಿದರು ಮತ್ತು ಅವರ ತವರು ನೆಲದಿಂದಲೇ ಇದೀಗ ಕಾಂಗ್ರೆಟ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.
ಮತ್ತೋರ್ವ ಬಿಜೆಪಿ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡ ಪಕ್ಷ ತೊರೆದು ಕಾಂಗ್ರೆಸ್ ಸೇರಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಸಿಎಂ ಕಚೇರಿಯಿಂದಲೇ ಯತ್ನ: ಡಿ.ಕೆ ಶಿವಕುಮಾರ್ ಗಂಭೀರ ಆರೋಪ
ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಮತ್ತು ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಅನುಮೋದಿಸುವಂತೆ ಸಿಎಂ ಕಚೇರಿಯಿಂದಲೇ ಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಸೋಲಿನ ಭಯದಿಂದ ಪ್ರತಿದಿನ ಆಧಾರ ರಹಿತ ಆರೋಪ- ಸಿಎಂ ಬೊಮ್ಮಾಯಿ
ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸೋಲಿನ ಭಯ ಕಾಡ್ತಿದೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ಆಧಾರರಹಿತ, ಅನುಪಯುಕ್ತ ಆರೋಪಗಳನ್ನು ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಸಾಂವಿಧಾನಿಕವಾಗಿ ರೂಪುಗೊಂಡ ಸ್ವತಂತ್ರ ಸಂಸ್ಥೆಯಾಗಿದೆ. ಇದು ಚುನಾವಣಾ ಆಯೋಗದ ನಿಯಮಗಳ ಪ್ರಕಾರ ನಡೆಯುತ್ತದೆ. ಹಾಗಾಗಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದರು.