ಕಲಬುರಗಿ:
ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಎಸಿಪಿ ಅನ್ಶು ಕುಮಾರ ಅವರ ನೇತೃತ್ವದಲ್ಲಿ ನಡೆದ ಗುರುವಾರದ ಕಾರ್ಯಾಚರಣೆಯಲ್ಲಿ ಮಾಸ್ಕ್ ಧರಿಸದವರಿಂದ 12 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.
ನಗರದ ವಿವಿಧೆಡೆ ಜನನಿಬಿಡ ವೃತ್ತದಲ್ಲಿ ಮಾಸ್ಕ್ ಜಾಗೃತಿ ಅಭಿಯಾನದ ನಿಮಿತ್ಯ ಮಾಸ್ಕ್ ಧರಿಸದ ಸುಮಾರು 48 ಜನರಿಂದ 12,000 ರೂ. ದಂಡ ವಸೂಲಿ ಮಾಡಲಾಗಿದೆ. ಮಾಸ್ಕ್ ಕಡ್ಡಾಯವಾದಾಗಿನಿಂದ ಇಲ್ಲಿಯವರೆಗೆ ಪಾಲಿಕೆಯಿಂದ ನಗರದಲ್ಲಿ ಸುಮಾರು 4.30 ಲಕ್ಷ ರೂ. ದಂಡ ವಿಧಿಸಲಾಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಕಲಬುರಗಿಯ ದೇವಸ್ಥಾನದ ದರ್ಶನಕ್ಕೆಂದು ಕ್ರೂಸರ್ ವಾಹನದಲ್ಲಿ ಮಾಸ್ಕ್ ಧರಿಸದೇ ಬಂದಿದ್ದ ವಾಹನ ಚಾಲಕ ಮತ್ತು ಪ್ರಯಾಣಿಕರ ತಂಡದ ಮುಖ್ಯಸ್ಥನಿಗೆ ದಂಡ ವಿಧಿಸಲಾಯಿತು. ಇನ್ನು, ವಾಹನದಲ್ಲಿದ್ದ ಪುಟ್ಟ ಪೋರನಿಗೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಖುದ್ದಾಗಿ ಮಾಸ್ಕ್ ಹಾಕಿ ಗಮನ ಸೆಳೆದರು.
ಮಾಸ್ಕ್ ಜಾಗೃತಿ ಅಭಿಯಾನದ ಅಂಗವಾಗಿ ಮಾಸ್ಕ್ ಹಾಕದೆ ತಿರುಗಾಡುತ್ತಿದ್ದ ಕಲಬುರಗಿ ನಗರದ ಸಾರ್ವಜನಿಕರಿಗೆ ಗುರುವಾರ ಡಿ.ಸಿ. ವಿ.ವಿ.ಜ್ಯೋತ್ಸ್ನಾ ಅವರ ನೇತೃತ್ವದ ಅಧಿಕಾರಿಗಳ ತಂಡ 48 ಜನರಿಗೆ 12000 ರೂ. ದಂಡ ಹಾಕಿದೆ@KarnatakaVarthe @DHFWKA @iaspankajpandey @KlbDistPolice @KalaburgiCorp pic.twitter.com/n8Jj6wLl1L
— DIPR-KALABURAGI (@Kalaburgivarthe) November 5, 2020
ಸರ್ದಾರ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಕಲಬುರಗಿ-ಶಹಾಬಾದ ಸಂಚರಿಸುತ್ತಿದ್ದ ಸಾರಿಗೆ ಬಸ್ಸು ಹತ್ತಿದ ಜಿಲ್ಲಾಧಿಕಾರಿಗಳು ಪ್ರಯಾಣಿಕರಿಗೆ ಮಾಸ್ಕ್ ವಿತರಿಸಿದರು. ಮಾಸ್ಕ್ ಇಲ್ಲದೇ, ಪ್ರಯಾಣಕ್ಕೆ ಅನುಮತಿ ನೀಡಿದ್ದರಿಂದ ಬಸ್ಸು ನಿರ್ವಾಹಕನಿಗೆ ದಂಡ ವಿಧಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಲಿಕೆ ಆರೋಗ್ಯಾಧಿಕಾರಿ ಡಾ. ವಿನೋದ ಕುಮಾರ ಸೇರಿ ಪಾಲಿಕೆ ಸಿಬ್ಬಂದಿಗಳು, ಸಂಚಾರಿ ಪೊಲೀಸರು ಉಪಸ್ಥಿತರಿದ್ದರು.