Home ಬೆಂಗಳೂರು ನಗರ ಬೆಂಗಳೂರು ನಗರ ಜಿಲ್ಲೆಯ ಕೆರೆಗಳಿಗೆ ಕಲುಷಿತ ನೀರು ಹರಿಯದಂತೆ ಕ್ರಮ ಹಾಗೂ ಕೆರೆಗಳಿಗೆ ಸಂಸ್ಕರಿಸಿದ ನೀರು...

ಬೆಂಗಳೂರು ನಗರ ಜಿಲ್ಲೆಯ ಕೆರೆಗಳಿಗೆ ಕಲುಷಿತ ನೀರು ಹರಿಯದಂತೆ ಕ್ರಮ ಹಾಗೂ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ

10
0

ಬೆಂಗಳೂರು, ಏ.07 ಬೆಂಗಳೂರು ನಗರ ಜಿಲ್ಲೆಯ ಕೆರೆಗಳಿಗೆ ಕಲುಷಿತ ನೀರು ಹರಿಯದಂತೆ ಕ್ರಮ ಕೈಗೊಳ್ಳಲು ಹಾಗೂ ಎಲ್ಲಾ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆರೆಗಳ ಸಂರಕ್ಷಣೆ, ಕಸ ವಿಲೇವಾರಿ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಪ್ರಮುಖ ತೀರ್ಮಾನಗಳನ್ನು ಕೈಗೊಂಡರು.

ಕೆರೆಗಳ ಸಂರಕ್ಷಣೆ ದೃಷ್ಟಿಯಿಂದ ಸಂಸ್ಕರಿಸಿದ ನೀರನ್ನು ತುಂಬಿಸುವ ಜವಾಬ್ದಾರಿಯನ್ನು ಬೆಂಗಳೂರು ಜಲ ಮಂಡಳಿ (ಬಿಡಬ್ಲ್ಯೂಎಸ್ಎಸ್ ಬಿ)ಗೆ ವಹಿಸಲು ನಿರ್ಣಯ ಕೈಗೊಳ್ಳಲಾಯಿತು. ಇದರ ಜತೆಗೆ ಬೆಂಗಳೂರು ನಗರ ಜಿಲ್ಲೆಗೆ ಬಂದೊದಗಬಹುದಾದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳಿಗೆ ಸೂಚನೆ ನೀಡಿದರು.

ಇನ್ನು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಬೆಂಗಳೂರು ಜಲ ಮಂಡಳಿ ವತಿಯಿಂದ ಕುಡಿಯುವ ನೀರು ಪೂರೈಸಲು ಚಿಂತನೆ ನಡೆಸಲಾಯಿತು.

ಬೆಂಗಳೂರಿನಲ್ಲಿ ಕಟ್ಟಡ ಭಗ್ನ ಅವಶೇಷಗಳನ್ನು (ಕಟ್ಟಡ ತ್ಯಾಜ್ಯ) ಎಲ್ಲೆಂದರಲ್ಲಿ ಸುರಿಯುತ್ತಿರುವುದನ್ನು ತಪ್ಪಿಸಲು ಈ ತ್ಯಾಜ್ಯಗಳನ್ನು ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಲಾರಿಗಳು ಕಸವನ್ನು ಎಲ್ಲಿಂದ ಸಂಗ್ರಹಿಸಿ ಎಲ್ಲಿ ವಿಲೇವಾರಿ ಮಾಡುತ್ತವೆ ಎಂದು ಮೇಲ್ವಿಚಾರಣೆ ಮಾಡಲು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಂತರ ಸುಮನಹಳ್ಳಿಯ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಯಶವಂತಪುರ ವೃತ್ತದ ಬಳಿ ಸುಮಾರು 10-15 ಲೋಡ್ ಗಳಷ್ಟು ಕಟ್ಟಡ ತ್ಯಾಜ್ಯಗಳನ್ನು ರಸ್ತೆ ಪಕ್ಕದಲ್ಲಿ ಸುರಿದಿರುವುದನ್ನು ನಾನು ಹಾಗೂ ಪಾಲಿಕೆ ಆಯುಕ್ತರು ನೋಡಿದೆವು. ಹೀಗಾಗಿ ಎಲ್ಲಾ ತ್ಯಾಜ್ಯ ಸಾಗಿಸುವ ಲಾರಿ ಹಾಗೂ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here