ಉಡುಪಿ, ಜ.1: ಇಂದಿನ ಯುವ ಮನಸ್ಸುಗಳು ಬೇರೆ ಬೇರೆ ಕಾರಣಗಳಿಂದ ಕಲುಷಿತಗೊಂಡಿರುತ್ತದೆ. ಈ ಕಶ್ಮಲ ತುಂಬಿ ರುವ ಯುವ ಮನಸುಗಳನ್ನು ಶುದ್ಧವಾಗಿಸುವುದು ಈ ನೆಲದ ಸೌಹಾರ್ದತೆಯನ್ನು ಬಯಸುವವರ ಮುಂದೆ ಇರುವ ಸವಾಲು. ಸೌಹಾರ್ದತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಮಕ್ಕಳಿಗೆ, ಯುವ ಜನತೆಗೆ ತೋರಿಸಿ ದಾಗ ಯುವ ಸಮುದಾಯವು ಆರೋಗ್ಯವಂತ ಮನಸ್ಸುಗಳನ್ನ ಪಡೆದುಕೊಳ್ಳಬಹುದು ಎಂದು ಯುವ ಬರಹ ಗಾರರಾದ ಮಹಮ್ಮದ್ ಶಾರೂಕ್, ಓಸ್ಕರ್ ಲುವಿಸ್, ಸಚಿನ್ ಅಂಕೋಲ ಅಭಿಪ್ರಾಯಪಟ್ಟಿದ್ದಾರೆ.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶಯದಲ್ಲಿ ಜರಗಿದ 50ನೇ ವರ್ಷದ ಡಿಸೆಂಬರ್ ತಿಂಗಳ ‘ಯುವ ನಡೆ ಸೌಹಾರ್ದತೆಯಡೆ’ ಸಂವಾದ ಕಾರ್ಯಕ್ರಮ ದಲ್ಲಿ ಅವರು ಮಾತನಾಡುತಿದ್ದರು.
ನಮ್ಮ ಹಿರಿಯರ ಕಾಲದಲ್ಲಿ ಕೊಡುಕೊಳ್ಳುವಿಕೆಯಲ್ಲಿ ಯಾವುದೇ ಧರ್ಮ ಅಡ್ಡಿ ಬರುತ್ತಿದ್ದಿಲ್ಲ. ಅಲ್ಲೊಂದು ಮಾನವೀಯತೆ, ಸೌಹಾರ್ದತೆ ಗಟ್ಟಿಯಾಗಿತ್ತು. ಆದರೆ ಇಂದಿನ ದಿನಮಾನದಲ್ಲಿ ಅದು ಶಿಥಿಲವಾಗುತ್ತಿದೆ. ಧರ್ಮ ಧರ್ಮಗಳ ಮಧ್ಯೆ ಅಪ ನಂಬಿಕೆ ತಲೆ ಎತ್ತುತ್ತಿದೆ. ಧರ್ಮಗಳ ಮಧ್ಯೆ ಕಂದಕಗಳನ್ನು ಶಾಶ್ವತ ವಾಗಿರಿಸುವ ಪ್ರಯತ್ನ ನಮ್ಮ ರಾಜಕಾರಣಿಗಳಿಂದ ಆಗುತ್ತಿದೆಂದು ಮಹಮ್ಮದ್ ಶಾರೂಕ್ ತಿಳಿಸಿದರು.
ಓಸ್ಕರ್ ಲುವಿಸ್ ಮಾತನಾಡಿ, ಒಂದು ರೀತಿಯಲ್ಲಿ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆ, ಕೋಮುವಾದದ ಪ್ರಯೋಗ ಶಾಲೆ ಯಾದರೂ ಇಲ್ಲಿನ ಸೌಹಾರ್ದತೆ ಗಟ್ಟಿಯಾಗಿ ನೆಲೆ ನಿಂತಿದೆ. ಅದಕ್ಕೆ ಕಾರಣ ಈ ಮಣ್ಣಿನ ಶಕ್ತಿ. ಹಬ್ಬಗಳನ್ನು ನಾವು ವಿಭಜಿಸಿ ಬಿಟ್ಟಿದ್ದೇವೆ. ಈ ಆಚರಣೆಗಳು ಒಂದಾದರೆ ಖಂಡಿತ ಸಾಮರಸ್ಯ ಉಳಿಯುತ್ತದೆ. ಮುಂದಿನ ಯುವಪೀಳಿಗೆ ವ್ಯಾಟ್ಸಪ್ ಯೂನಿವರ್ಸಿಟಿಯಿಂದ ಹೊರಬಂದು ವೈಚಾರಿಕ ಮನೋಭಾವವನ್ನು ಬೆಳೆಸಿಕೊಳ್ಳದಿದ್ದರೆ ಸೌಹಾರ್ದತೆ ಎಂಬುದು ವಸ್ತು ಸಂಗ್ರಹಾಲಯದಲ್ಲಿ ರುವ ಆ್ಯಂಟಿಕ್ ಪೀಸ್‌ಗಳಾಗುತ್ತದೆ ಎಂದರು
ನಟ, ಕವಿ ಸಚಿನ್ ಅಂಕೋಲ ಮಾತನಾಡಿ, ಸೌಹಾರ್ದತೆ ನಮ್ಮ ಕರಾವಳಿಯಲ್ಲಿ ಹೊಸತಲ್ಲ. ನಮ್ಮ ಆಚರಣೆಗಳು ನಮ್ಮ ಸೌಹಾರ್ದತೆ ನೆಲೆಯನ್ನು ಗಟ್ಟಿಗೊಳಿಸಿದೆ. ನಮ್ಮ ಹಿರಿಯರು ಬದುಕಿದ ಪರಿ ಇದು ಇದು ಆದರೆ ಇಂದು ಶಿಥಿಲವಾಗುತ್ತಿದೆ. ಕರಾವಳಿಯಲ್ಲಿ ಮೊದಲಿಂದಲೂ ಸಾಮರಸ್ಯ ಇದ್ದುದರಿಂದ ಬೇರೆ ಜಿಲ್ಲೆಗೆ ಹೋಲಿಸಿದರೆ ಕರಾವಳಿ ಅಭಿವೃದ್ಧಿ ಡಾಳಾಗಿ ಕಾಣುತ್ತದೆ. ಅದು ಹಿನ್ನಡೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಯುವ ಜನತೆಯ ಮೇಲಿದೆ ಎಂದು ತಿಳಿಸಿದರು.
ಡಾ.ಫೈಸಲ್, ಪ್ರತಾಪ್ ಕುಮಾರ್, ನಾದ ಮಣಿನಾಲ್ಕೂರು ಮೊದಲಾದ ವರು ಸಂವಾದದಲ್ಲಿ ಪಾಲ್ಗೊಂಡರು. ಸಂಸ್ಥೆಯ ಅಧ್ಯಕ್ಷ ತಿಲಕ್‌ರಾಜ್ ಸ್ವಾಗತಿಸಿದರು. ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಅಲಿ ವಂದಿಸಿದರು. ನಿರ್ದೇಶಕ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.