ಕಲಬುರಗಿ/ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಇಂದು(ಜ.19) ಕಲ್ಯಾಣ ಕರ್ನಾಟಕ್ಕೆ ಎಂಟ್ರಿ ಕೊಡಲಿದ್ದಾರೆ. ಇಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೋದಿ ಮೇನಿಯಾ ಸೃಷ್ಟಿಯಾಗಿದೆ. ಗಡಿ ಜಿಲ್ಲೆಯಾಗಿರುವ ಯಾದಗಿರಿ ಜಿಲ್ಲೆಯ ಜನರಿಗೆ ಸಾವಿರಾರು ಕೋಟಿ ರೂಪಾಯಿಗಳ ಯೋಜನೆ ನೀಡಲಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ಮೋದಿ ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆ ಸಿದ್ದವಾಗಿದೆ.
ಹೇಳಿ ಕೇಳಿ ಇದು ಚುನಾವಣೆ ಸಮಯ, ಪಕ್ಷಗಳ ಪ್ರಮುಖ ನಾಯಕರ ಭೇಟಿಯು ರಾಜಕೀಯ ತಂತ್ರಗಾರಿಕೆಯ ಒಂದು ಭಾಗವಾಗಿರುತ್ತದೆ. ಕಲಬುರಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರು ಜಿಲ್ಲೆ. ಪ್ರಧಾನಿಯವರ ಭೇಟಿಯನ್ನು ಕಾಂಗ್ರೆಸ್ ಸಹ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರಧಾನಿ ಮೋದಿ ಇದೆ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಮೋದಿ ಆಗಮನಕ್ಕಾಗಿ ಯಾದಗಿರಿ ಜನ ಕಾತರದಿಂದ ಕಾಯುತ್ತಿದ್ದಾರೆ. ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮಕ್ಕೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಿಎಂ ಮೋದಿ ಎಂಟ್ರಿ ನೀಡಲಿದ್ದಾರೆ. ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಬಳಿಕ ಕಲಬುರ್ಗಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕೊಡೆಕಲ್ ನಲ್ಲಿ ನಿರ್ಮಾಣ ಮಾಡಿರುವ ಹೆಲಿಫ್ಯಾಡ್ ಗೆ ಬಂದಿಳಿಯಲಿದ್ದಾರೆ. ಮೋದಿ ಜೊತೆಗೆ ರಾಜ್ಯದ ರಾಜಪಾಲರು, ಸಿಎಂ ಬಸವರಾಜ ಬೊಮ್ಮಾಯಿ, ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಹಲವು ಜನ ಸಚಿವರು ಹಾಗೂ ಶಾಸಕರು ಬರಲಿದ್ದಾರೆ.
ಮೋದಿ ಕಾರ್ಯಕ್ರಮಕ್ಕಾಗಿ ಸುಮಾರು 2 ಲಕ್ಷ ಜನ ಬರುವ ನಿರೀಕ್ಷೆಯಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಬರುವ ಜನರಿಗಾಗಿ ಸುಮಾರು 1.10 ಲಕ್ಷ ಆಸನದ ವ್ಯವಸ್ಥೆ ಕೂಡ ಜಿಲ್ಲಾಡಳಿತ ಮಾಡಿಕೊಂಡಿದೆ. ಇನ್ನು ಕಾರ್ಯಕ್ರಮದ ವೇದಿಕೆ ಹಿಂಭಾಗದಲ್ಲಿ ಸುಮಾರು 300 ಮೀಟರ್ ದೂರದಲ್ಲಿ ಮೂರು ಹೆಲಿಫ್ಯಾಡ್ ಗಳನ್ನ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಪೊಲೀಸರಿಂದ ಬಾರಿ ಬಂದೋಬಸ್ತ್ ಮಾಡಲಾಗಿದೆ. ಬಳ್ಳಾರಿ ಐಜಿಪಿ ಲೋಕೇಶ್ ಕುಮಾರ್ ನೇತೃತ್ವದಲ್ಲಿ ಎಲ್ಲಾ ರೀತಿಯ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಯಾದಗಿರಿ, ಬಾಗಲಕೋಟೆ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಿಂದ 2 ಸಾವಿರಕ್ಕೂ ಅಧಿಕ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.
ಮಳಖೇಡದಲ್ಲಿ ಮೋದಿ ಕಾರ್ಯಕ್ರಮದ ವೇದಿಕೆ ಸುತ್ತ ಬಿಗಿ ಭದ್ರತೆ, ಭಾರೀ ಸಿದ್ಧತೆ: ಮಳಖೇಡ್ನಲ್ಲಿ ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದವರಿಗೆ ಊಟೋಪಚಾರದ ವ್ಯವಸ್ಥೆ ಸಿದ್ಧವಾಗುತ್ತಿದೆ. ಐನೂರಕ್ಕೂ ಹೆಚ್ಚು ಸಿಬ್ಬಂದಿ ಅಡುಗೆ ತಯಾರಿಯಲ್ಲಿ ತೊಡಗಿದ್ದಾರೆ. ಮೂರು ಲಕ್ಷ ಜನರಿಗೆ ಆಗುವಷ್ಟು ಆಹಾರ ಸಿದ್ದವಾಗುತ್ತಿದೆ. ಮುನ್ನೂರು ಕ್ವಿಂಟಲ್ ಅಕ್ಕಿ, ಇಪ್ಪತ್ತು ಕ್ವಿಂಟಲ್ ತರಕಾರಿ, ಆರು ಸಾವಿರ ಲೀಟರ್ ಎಣ್ಣೆ ಬಳಕೆ ಮಾಡಲಾಗುತ್ತಿದೆ. ಮೂರು ಲಕ್ಷ ಮೈಸೂರು ಪಾಕ್ ಸಿದ್ದಗೊಳ್ಳುತ್ತಿದೆ. ಊಟ ನೀಡಲು ಇನ್ನೂರು ಕೌಂಟರ್ ಸಿದ್ದವಾಗಿದೆ. ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದಕ್ಲಾಗಿಯೇ ನಿಯೋಜಿಸಲಾಗಿದೆ.
ಯಾದಗಿರಿಯಲ್ಲಿಯೂ ಭರ್ಜರಿ ತಯಾರಿ: ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೆಕಲ್ನಲ್ಲಿ ಇಂದು ಪ್ರಧಾನಿ ಮೋದಿ ಸಮಾವೇಶ ಹಿನ್ನೆಲೆ ಸಮಾವೇಶಕ್ಕೆ ಬರುವವರಿಗೆ ಪಲಾವ್, ಮೊಸರನ್ನ, ಪಾಯಸ ವ್ಯವಸ್ಥೆ ಮಾಡಲಾಗಿದೆ. ಸುಮಾರು 300 ಕೌಂಟರ್ ಮೂಲಕ ಊಟ ಸಿಬ್ಬಂದಿ ಬಡಿಸಲಿದ್ದಾರೆ. ಸಮಾವೇಶಕ್ಕೆ ಬರುವ ಸುಮಾರು 3 ಲಕ್ಷ ಜನರಿಗೆ ಊಟ ತಯಾರಿ ಮಾಡಲಾಗುತ್ತಿದೆ. ಸಮಾವೇಶಕ್ಕೆ ಬರುವ ಗಣ್ಯರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿದ್ದು ಸುಮಾರು 200 ಗಣ್ಯರಿಗೆ ಸಿಬ್ಬಂದಿ ಊಟ ಸಿದ್ಧಪಡಿಸುತ್ತಿದ್ದಾರೆ. ಸಮಾವೇಶಕ್ಕೆ ಬರುವ ವಿಐಪಿಗಳಿಗೆ ಮೆಂತ್ಯ ಚಪಾತಿ, ಹೋಳಿಗೆ, ಕುರ್ಮಾ, ಹೆಸರುಕಾಳು ಪಲ್ಯ, ಅನ್ನ ಸಾಂಬರ್, ಮೊಸರು ಬಜ್ಜಿ ಸಿದ್ಧವಾಗುತ್ತಿದೆ.
ಕಲಬುರಗಿ ಜಿಲ್ಲೆಯಲ್ಲಿಂದು ಸರ್ಕಾರಿ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯ
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ಕಲಬುರಗಿ ಜಿಲ್ಲೆಯಲ್ಲಿ ಇಂದು ಸರ್ಕಾರಿ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ಗಳನ್ನು ಕರಾರು ಒಪ್ಪಂದದ ಮೇಲೆ ನೀಡಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಇಂದು ರಾತ್ರಿ ವರೆಗೂ ಈ ಸಮಸ್ಯೆ ಇರಲಿದೆ. 2300 ಬಸ್ ಗಳನ್ನು ಕರಾರು ಒಪ್ಪಂದದ ಮೇಲೆ ಕೆಕೆಆರ್ಟಿಸಿ ನೀಡಿದೆ.
Home Uncategorized ಕಲ್ಯಾಣ ಕರ್ನಾಟಕದಲ್ಲಿಂದ ಮೋದಿ ಮೇನಿಯಾ: ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ, ಊಟೋಪಚಾರ ವ್ಯವಸ್ಥೆ, ಬಿಗಿ ಭದ್ರತೆ