Home Uncategorized ಕಲ್ಲಡ್ಕ ಪ್ರಭಾಕರ ಭಟ್ ಏನು ಮೇಲಿಂದ ಇಳಿದು ಬಂದಿಲ್ಲ, ಸಧ್ಯದಲ್ಲಿಯೇ ಆತನ ಮೇಲೆ ಕ್ರಮ ಜರುಗಿಸಲಾಗುತ್ತದೆ:...

ಕಲ್ಲಡ್ಕ ಪ್ರಭಾಕರ ಭಟ್ ಏನು ಮೇಲಿಂದ ಇಳಿದು ಬಂದಿಲ್ಲ, ಸಧ್ಯದಲ್ಲಿಯೇ ಆತನ ಮೇಲೆ ಕ್ರಮ ಜರುಗಿಸಲಾಗುತ್ತದೆ: ಸಚಿವ ಶಿವರಾಜ್ ತಂಗಡಗಿ

35
0

ಮೈಸೂರು: ಒಂದು ಸಮುದಾಯದ ಕುರಿತು ಹೇಳಿಕೆ ನೀಡಿ ಅಪಮಾನಿಸಿರುವ ಕಲ್ಲಡ್ಕ ಪ್ರಭಾಕರ ಭಟ್ಟ ಏನು ಮೇಲಿಂದ ಇಳಿದು ಬಂದಿಲ್ಲ. ಸಧ್ಯದಲ್ಲಿಯೇ ಆತನ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ” ಶ್ರೀರಂಗಪಟ್ಟಣದಲ್ಲಿ ಒಂದು ಸಮುದಾಯದ ಕುರಿತು ಅವಹೇಳನವಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ಟ ಏನು ಮೇಲಿಂದ ಇಳಿದು ಬಂದಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ, ಆತನ ಹೇಳಿಕೆ ಬಗ್ಗೆ ಈಗಾಗಲೇ ಸರ್ಕಾರದಲ್ಲಿ ಚರ್ಚೆ ನಡೆದಿದೆ. ಈ ವಿಚಾರದಲ್ಲಿ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ನಾಲ್ಕು ದಿನ ತಡವಾದರೂ ಆತನ ಮೇಲೆ ಕ್ರಮ ಆಗೇ ಆಗುತ್ತದೆ ಎಂದು ಹೇಳಿದರು.

ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಯಾರೂ ದೊಡ್ಡವರಲ್ಲ. ಯಾರನ್ನು ಪೋಷಣೆ ಮತ್ತು ಪಾಲನೆ ಮಾಡುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಕನ್ನಡ ಪರ ಹೋರಾಟ ಮಾಡಲು ನಮ್ಮ ಬೆಂಬಲ ಇದೆ

ಕನ್ನಡ ಹೋರಾಟಗಾರರ ಬಂಧನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೋರಾಟ ಮಾಡಲು ನಮ್ಮ ಬೆಂಬಲ ಇದೆ. ಆದರೆ ಹೋರಾಟದ ಜೊತೆಗೆ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಕನ್ನಡ ನಾಫಲಕಗಳನ್ನು 60:40 ಮಾದರಿಲ್ಲಿ ಹಾಕಲು ಕೆಲವು ಕಾನೂನು ತೊಡಕುಗಳನ್ನು ಸರಿಪಡಿಸಿ ಸುತ್ತೋಲೆ ಹೊರಡಿಸಲು ಫೆಬ್ರವರಿಯೊಳಗೆ ಕಾಲಾವಕಾಶ ನೀಡಲಾಗಿದೆ. ಅಷ್ಟರಲ್ಲಿ ಸರಕಾರದ ಗಮನಕ್ಕೆ ತರದೆ ಕನ್ನಡ ಹೋರಾಟಗಾರರು ಮುಂದಾಗಿದ್ದು ಸರಿಯಲ್ಲ ಎಂದು ಹೇಳಿದರು.

ಈಗಾಗಲೇ ಸರೋಜಿನಿ ಮಹಿಷಿ ವರದಿ ಜಾರಿಗೆ ತರಲು ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಸದನದಲ್ಲಿ ಬಿಲ್ ಪಾಸ್ ಮಾಡಿದ್ದೇವೆ. ಕೆಲವು ರೂಲ್ಸ್ ಫ್ರೇಮ್ ಮಾಡಬೇಕು. ಈ ಸಂಬಂಧ ನವೆಂಬರ್ ನಲ್ಲಿ ಸಭೆ ನಡೆಸಲಾಗಿದೆ. ಈ ಸಂಬಂಧ ಎರಡು ಸಭೆಗಳಾಗಿದ್ದು, ಒಂದು ಅಂತಿಮ ಸಭೆ ನನ್ನ ನೇತೃತ್ವದಲ್ಲಿ ನಡೆಯಬೇಕಿದೆ ಎಂದು ಹೇಳಿದರು.

ಸಿಬಿಐ ನೋಟಿಸ್ ರಾಜಕೀಯ ಪ್ರೇರಿತ

ಕೇಂದ್ರ ಸರ್ಕಾರ ಸಿಬಿಐ, ಐಟಿ, ಈಡಿ ಯನ್ನು ಸ್ವಂತ ಆಸ್ತಿ ಮಾಡಿಕೊಂಡಿದೆ. ಹಾಗಾಗಿ ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ನಡೆಸುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲಿನ ಸಿಬಿಐ ತನಿಖೆಯನ್ನು ಸರಕಾರ ಹಿಂಪಡೆದಿದೆ. ಆದರೂ ಮತ್ತೊಂದು ಪ್ರಕರಣ ಎಂದು ಸಿಬಿಐ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ ಎಂದು ಹೇಳಿದರು.

LEAVE A REPLY

Please enter your comment!
Please enter your name here