ಉಡುಪಿ, ಜ.3: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಪ್ರಯುಕ್ತ ಉಡುಪಿ ನಗರದ ರಸ್ತೆಗಳಿಗೆ ಡಾಮರೀಕರಣ ಮಾಡುವ ಕಾರ್ಯ ನಡೆಯುತ್ತಿದ್ದು, ಕೆಲವು ರಸ್ತೆಗಳಿಗೆ ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿ ನಡೆಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತೆಂಕಪೇಟೆಯ ಮುಖ್ಯ ರಸ್ತೆ ಹಾಗೂ ಹಳೆ ಅಂಚೆ ಕಛೇರಿ ರಸ್ತೆಗಳಲ್ಲಿ ತೇಪೆ ಹಾಕುವ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರು ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ನಗರಸಭೆಯ ಪೌರಾಯುಕ್ತರು, ಕಾಮಗಾರಿ ಪರೀಶಿಸಿದರು.
‘ಇಂದು ಬೆಳಗ್ಗೆ ಸುರಿದ ಮಳೆಯಿಂದ ಕೆಲವು ಕಡೆ ಡಾಮರು ಕಿತ್ತು ಹೋಗಿದೆ. ಕಳಪೆ ಮಟ್ಟದ ಕಾಮಗಾರಿ ನಡೆಸಿದರೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡು ವುದಿಲ್ಲ. ಮಳೆ ಮುಗಿದ ಕೂಡಲೇ ಮರು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಎಂದು ಪೌರಾಯುಕ್ತ ರಾಯಪ್ಪ ತಿಳಿಸಿದರು.
ಸಾರ್ವಜನಿಕ ರಸ್ತೆಗಳ ಕಾಮಗಾರಿಗಳು ಸಾರ್ವಜನಿಕರ ಕರದ ಹಣದಿಂದಲೇ ನಡೆಯುತ್ತಿರುವುದು. ಕಾಮಗಾರಿಯ ಉಸ್ತುವಾರಿ ಹೊತ್ತವರು ದನದಾಹದಿಂದ ಸಾರ್ವಜನಿಕರ ಹಣವನ್ನು ನುಂಗುವುದು ಸರಿಯಲ್ಲ. ಮೇಲಾಧಿಕಾರಿಗಳು ಕಾಮಗಾರಿಯ ಸ್ಥಳದಲ್ಲಿ ಗಸ್ತು ಇರಬೇಕು. ಕಾಮಗಾರಿಯ ಗುಣಮಟ್ಟದ ಪರೀಶಿಲನೆ ನಡೆಸುತ್ತಿರಬೇಕು. ಆವಾಗ ಮಾತ್ರ ಸಾರ್ವಜನಿಕರ ಹಣವನ್ನು ಪೋಲಾಗುವುದನ್ನು ತಪ್ಪಿಸಬಹುದು ಮಾಜಿ ನಗರ ಸಭೆಯ ಸದಸ್ಯ ನಿತ್ಯಾನಂದ ಒಳಕಾಡುವರು ತಿಳಿಸಿದ್ದಾರೆ.
