ಹೊಸದಿಲ್ಲಿ: 2018-2023ರ ನಡುವೆ 36,838 ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೀಗೆ ತೆಗೆದು ಹಾಕಲಾಗಿರುವ ಪೋಸ್ಟ್ ಗಳ ಪೈಕಿ ಸಿಂಹಪಾಲು ಎಕ್ಸ್ ಸಾಮಾಜಿಕ ಮಾಧ್ಯಮಕ್ಕೆ ಸೇರಿದ್ದು, 13,660 ಪೋಸ್ಟ್ ಗಳನ್ನು ಆ ವೇದಿಕೆಯಿಂದ ತೆಗೆದು ಹಾಕಲಾಗಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ ಎಂದು thewire.in ವರದಿ ಮಾಡಿದೆ.
ಸಿಪಿಐಎಂನ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಸ್ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರವು ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಬಹುತೇಕ ಪೋಸ್ಟ್ ಗಳನ್ನು (9,849) 2020ರಲ್ಲಿ ತೆಗೆದು ಹಾಕಲಾಗಿದ್ದು, ಆ ವರ್ಷವು ಕೋವಿಡ್-19 ಸಾಂಕ್ರಾಮಿಕ ವಿಶ್ವವ್ಯಾಪಿಯಾಗಿದ್ದ ಅವಧಿಯಾಗಿತ್ತು.
ಯಾವುದೇ ತುಣುಕು, ಮಾಹಿತಿ, ದತ್ತಾಂಶ ಅಥವಾ ಸಂಪರ್ಕ ಕೊಂಡಿಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2020ರ ಅಡಿಯ ನಿಯಮಗಳನ್ವಯ ತೆಗೆದು ಹಾಕಲು, ಪರಿವರ್ತಿಸಲು ಅಥವಾ ನಿರ್ಬಂಧಿಸಿರುವಂತೆ ಕಳೆದ ಐದು ವರ್ಷಗಳಲ್ಲಿ ಮಧ್ಯಸ್ಥ ಸಂಸ್ಥೆಗಳಿಗೆ ನೀಡಿರುವ ನಿರ್ದೇಶನ/ಆದೇಶಗಳ ಕುರಿತು ಅಂಕಿಸಂಖ್ಯೆ ಮತ್ತು ವಿವರಗಳ ಕುರಿತು ಮಾಹಿತಿ ಒದಗಿಸುವಂತೆ ಕೇರಳವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಸ್ ಕೋರಿದ್ದರು.
ಅದಕ್ಕೆ ಪ್ರತಿಯಾಗಿ, ಎಕ್ಸ್ ಸಾಮಾಜಿಕ ಮಾಧ್ಯಮ (13,660), ಫೇಸ್ ಬುಕ್ (10,197), ಯೂಟ್ಯೂಬ್ (5,759), ಇತರೆ (4,199) ಹಾಗೂ ಇನ್ಸ್ಟಾಗ್ರಾಮ್ (3,023)ನ ಪೋಸ್ಟ್ ಗಳನ್ನು ನಿರ್ಬಂಧಿಸಲಾಗಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಯಿತು.