ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಇನ್ನೂ ಎರಡು ‘ಖಾತರಿ’ ಯೋಜನೆಗಳಾದ ‘ಅನ್ನ ಭಾಗ್ಯ’ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ ಬದಲಾಗಿ ಫಲಾನುಭವಿಗಳಿಗೆ ನಗದು ನೀಡುವ ಮತ್ತು ‘ಗೃಹ ಜ್ಯೋತಿ’ ಯೋಜನೆಯಡಿ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದು ಶನಿವಾರದಿಂದ ಜಾರಿಗೆ ಬಂದಿದೆ. ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಇನ್ನೂ ಎರಡು ‘ಖಾತರಿ’ ಯೋಜನೆಗಳಾದ ‘ಅನ್ನ ಭಾಗ್ಯ’ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ ಬದಲಾಗಿ ಫಲಾನುಭವಿಗಳಿಗೆ ನಗದು ನೀಡುವ ಮತ್ತು ‘ಗೃಹ ಜ್ಯೋತಿ’ ಯೋಜನೆಯಡಿ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದು ಶನಿವಾರದಿಂದ ಜಾರಿಗೆ ಬಂದಿದೆ.
ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಮೂಲಕ ಸರ್ಕಾರವು ತನ್ನ ಐದು ಚುನಾವಣಾ ಖಾತರಿಗಳಲ್ಲಿ ಒಂದಾದ ‘ಶಕ್ತಿ’ ಅನ್ನು ಈಗಾಗಲೇ ಜಾರಿಗೆ ತಂದಿದೆ.
ಇಂದಿನಿಂದ “ಗೃಹಜ್ಯೋತಿ” ಯೋಜನೆಯಡಿ ಗರಿಷ್ಠ 200 ಯುನಿಟ್ ವರೆಗೆ ಗೃಹಬಳಕೆಯ ವಿದ್ಯುತ್ತನ್ನು ಉಚಿತವಾಗಿ ನೀಡುತ್ತಿದ್ದೇವೆ.
ಬೆಲೆಯೇರಿಕೆಯೆಂಬ ಕಗ್ಗತ್ತಲು ದೇಶವನ್ನು ಆವರಿಸಿರುವ ಈ ಹೊತ್ತಿನಲ್ಲಿ ನಾಡಿನ ಮನೆಗಳಿಗೆ ಬೆಳಕು ನೀಡುವ ಸದುದ್ದೇಶದ ಕಾರ್ಯಕ್ರಮವಿದು.
ಅಗತ್ಯಕ್ಕೆ ಅನುಗುಣವಾಗಿ ವಿದ್ಯುತ್ ಬಳಸುವ ಮೂಲಕ ಯೋಜನೆಯ ಸದ್ಬಳಕೆ… pic.twitter.com/UIir0z2AjC
— Siddaramaiah (@siddaramaiah) July 1, 2023
‘ಈ ತಿಂಗಳು ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಹಣ ಪಾವತಿ ಜುಲೈ 10ರ ನಂತರ ಪ್ರಾರಂಭವಾಗುವ ಸಾಧ್ಯತೆಯಿದೆ. ಗೃಹ ಜ್ಯೋತಿ ಯೋಜನೆ ಇಂದಿನಿಂದ ಜಾರಿಗೆ ಬಂದಿದ್ದು, ಬಿಲ್ಲಿಂಗ್ ಸೈಕಲ್ ಪ್ರಕಾರ ಈ ತಿಂಗಳಿನ ವಿದ್ಯುತ್ ಬಿಲ್ ಆಗಸ್ಟ್ ಆರಂಭದಲ್ಲಿ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜುಲೈ ತಿಂಗಳಿನ ಮೊತ್ತವನ್ನು (ಅನ್ನ ಭಾಗ್ಯ ಯೋಜನೆಯಡಿ) ಫಲಾನುಭವಿಗಳಿಗೆ ಜುಲೈನಲ್ಲಿಯೇ ಅಕ್ಕಿ ಬದಲಿಗೆ ಪಾವತಿಸಲಾಗುವುದು ಎಂದು ಹೇಳಿದ್ದೇವೆ. ಜುಲೈ 1ರಂದೇ ಪಾವತಿಸುತ್ತೇವೆ ಎಂದು ಹೇಳಿರಲಿಲ್ಲ. ಜುಲೈ 10ರ ನಂತರ ಪಾವತಿ ಆರಂಭಿಸುವ ಸಾಧ್ಯತೆ ಇದೆ. ಈ ತಿಂಗಳ ಮೊತ್ತವನ್ನು ಈ ತಿಂಗಳೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಜುಲೈ 1ರಿಂದ ಎಂದು ಹೇಳಿಲ್ಲ, ಜುಲೈ 10ರಿಂದ ಹಣ ಕೊಡುವ ಪ್ರಕ್ರಿಯೆ ಆರಂಭವಾಗಬಹುದು: ಸಿಎಂ ಸಿದ್ದರಾಮಯ್ಯ ವ್ಯತಿರಿಕ್ತ ಹೇಳಿಕೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೃಹ ಜ್ಯೋತಿ ಯೋಜನೆ ಇಂದು ಆರಂಭವಾಗಲಿದ್ದು, ಈ ತಿಂಗಳಿನಿಂದ ಉಚಿತ (200 ಯೂನಿಟ್ ವರೆಗೆ) ವಿದ್ಯುತ್ ದೊರೆಯಲಿದೆ. ಆದರೆ, ಆಗಸ್ಟ್ ತಿಂಗಳಿನಲ್ಲಿ ಬಿಲ್ ಬರಲಿದೆ ಎಂದರು.
ಒಂದು ವಾರ ಅಥವಾ 10 ದಿನಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೊತ್ತವನ್ನು ವರ್ಗಾಯಿಸಲಾಗುವುದು. ಶೇ 90 ರಷ್ಟು ಫಲಾನುಭವಿಗಳು ಬ್ಯಾಂಕ್ ಖಾತೆ ಹೊಂದಿದ್ದು, ಪ್ರತಿ ವ್ಯಕ್ತಿಗೆ 5 ಕೆಜಿ ಅಂದರೆ, ಫಲಾನುಭವಿಗೆ 170 ರೂ. ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.
ಇದೇ ವೇಳೆ ಚಿಕ್ಕಮಗಳೂರಿನಲ್ಲಿ ‘ಗೃಹ ಜ್ಯೋತಿ’ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಯೋಜನೆಗೆ ನೋಂದಣಿ ಕಾರ್ಯ ನಡೆಯುತ್ತಿದ್ದು, ಈವರೆಗೆ ಸುಮಾರು 86.5 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಇಂದಿನಿಂದಲೇ ಉಚಿತ ಕರೆಂಟ್ (200 ಯೂನಿಟ್ ವರೆಗೆ) ಅನ್ವಯವಾಗಲಿದ್ದು, ಆಗಸ್ಟ್ ಆರಂಭದಲ್ಲಿ ಬಿಲ್ ಬರಲಿದೆ ಎಂದರು.
‘ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆಯಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ತಿಂಗಳ ಪ್ರಯೋಜನವನ್ನು ಪಡೆಯಲು, ಜುಲೈ 24 ಅಥವಾ 25 ರೊಳಗೆ ಅರ್ಜಿ ಸಲ್ಲಿಸಬಹುದು. ಅದರ ಬಿಲ್ ಅನ್ನು ಆಗಸ್ಟ್‌ನಲ್ಲಿ ನೀಡಲಾಗುವುದು ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಕೊಟ್ಟ ಮಾತಿನಂತೆ ‘ಅನ್ನ ಭಾಗ್ಯ’ ಯೋಜನೆ ಜಾರಿ; 5 ಕೆಜಿ ಅಕ್ಕಿ ಜೊತೆ ನಾಳೆಯಿಂದಲೇ ಖಾತೆಗೆ ಹಣ ವರ್ಗಾವಣೆ: ಸಚಿವ ಮುನಿಯಪ್ಪ
ಗೃಹ ಜ್ಯೋತಿ ಯೋಜನೆಗೆ ‘ಸೇವಾ ಸಿಂದು’ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು ಅಥವಾ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. 2022-23ರ ಹಣಕಾಸು ವರ್ಷದ ಸರಾಸರಿ ಬಳಕೆಯ ಆಧಾರದ ಮೇಲೆ ಉಚಿತ ವಿದ್ಯುತ್ ಅನ್ನು ಲೆಕ್ಕಹಾಕಲಾಗುತ್ತದೆ. ಜೊತೆಗೆ ಅದರ ಮೇಲೆ ಶೇ 10 ರಷ್ಟು ಹೆಚ್ಚು ವಿದ್ಯುತ್ ನೀಡಲಾಗುತ್ತದೆ. ಆದರೆ, ಅದರ ಒಟ್ಟು ಮೊತ್ತವು 200 ಯೂನಿಟ್‌ಗಳಿಗಿಂತ ಹೆಚ್ಚಿರಬಾರದು.
ಚುನಾವಣಾ ಪೂರ್ವದಲ್ಲಿ ನೀಡಲಾಗಿದ್ದ ಐದು ಖಾತರಿಗಳ ಪೈಕಿ ಸರ್ಕಾರ ಇನ್ನೂ ಎರಡು ಖಾತರಿಗಳನ್ನು ಜಾರಿಗೆ ತರಬೇಕಿದ್ದು, ಪ್ರತಿ ಕುಟುಂಬದ ಮಹಿಳೆಯ ಮುಖ್ಯಸ್ಥರಿಗೆ ಮಾಸಿಕ 2,000 ರೂ. ನೀಡುವ ಗೃಹ ಲಕ್ಷ್ಮಿ ಮತ್ತು ನಿರುದ್ಯೋಗಿ ಪದವೀಧರ ಯುವಕರಿಗೆ ಪ್ರತಿ ತಿಂಗಳು 3,000 ರೂ ಹಾಗೂ ನಿರುದ್ಯೋಗಿ ಡಿಪ್ಲೋಮಾ ಹೊಂದಿರುವವರಿಗೆ 1,500 ರೂ. ನೀಡುವ ಯುವ ನಿಧಿ ಯೋಜನೆಗಳನ್ನು ಸರ್ಕಾರ ಶೀಘ್ರವೇ ಪ್ರಾರಂಭಿಸಲಿದೆ.