ಬೆಂಗಳೂರು: ನಟಿ ರಿಷಬ್ ಶೆಟ್ಟಿ ಅಭಿನಯ ಕಾಂತಾರಾ ಚಿತ್ರದ ಕುರಿತು ತುಂಬಿದ ವೇದಿಕೆಯಲ್ಲೇ ಅಪಹಾಸ್ಯ ಮಾಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಮಂಗಳವಾರ ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದೆ.
ಗೋವಾದಲ್ಲಿ ಸಿನಿಮಾ ಫೆಸ್ಟಿವಲ್ ವೇಳೆ ಕಾಂತಾರ ಸಿನಿಮಾ ಕುರಿತು ಅಪಹಾಸ್ಯ ಮಾಡಿದ್ದಾರೆ ಎಂಬ ಆರೋಪವಿತ್ತು. ನಟ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ದೈವವನ್ನು ಫೀಮೇಲ್ ಗೋಸ್ಟ್ ಎಂದು ಹೇಳಿಕೆ ನೀಡಿದ್ದ ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನಾಗಪ್ರಸನ್ನ ಪೀಠ ರಣವೀರ್ ಸಿಂಗ್ ರನ್ನ ತರಾಟಗೆ ತೆಗೆದುಕೊಂಡಿದೆ.
ಒಂದು ಭಾಗದ ಜನರ ಮತ್ತು ಧಾರ್ಮಿಕ ಭಾವನೆಗೆ ದಕ್ಕೆ ತರುವ ಹಾಗೆ ಮಾತಬಾಡಬಾರದು. ಅದು ರಣವೀರ್ ಸಿಂಗ್ ಅಗಿರಲಿ, ಯಾರೇ ಅಗಿದ್ದು ಸರಿ ಹಾಗೆ ಮಾತನಾಡುವುದು ಸಲ್ಲದು. ಸೂಪರ್ ಸ್ಟಾರ್ ಅಗಿರುವ ರಣವೀರ್ ಸಿಂಗ್ ಗೆ ಸಾಕಷ್ಟು ಜನ ಫಾಲೊ ಮಾಡುವವರು ಇದ್ದಾರೆ. ಹೀಗಾಗಿ ಇದನ್ನ ಹಗುರವಾಗಿ ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ರಣವೀರ್ ಸಿಂಗ್ ಪರವಾಗಿ ಸಜನ್ ಪೂವಯ್ಯ ಕೋರ್ಟ್ ಗೆ ಹಾಜರ್ ಆಗಿ ವಾದ ಮಂಡಿಸಿದ್ರು. ರಿಷಬ್ ಶೆಟ್ಟಿ ಅಭಿನಯನದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಮಾತನಾಡಿದ ಪದಗಳಿಗು ಕೂಡ ಕ್ಷಮೆ ಕೋರಲಾಗಿದೆ. ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡಿಲ್ಲ. ಅಲ್ಲದೆ ತನಿಖೆಗೆ ಕೂಡ ಸಹಕಾರ ನೀಡುವುದಾಗಿ ಕೋರ್ಟ್ ಗೆ ಮಾಹಿತಿ ನೀಡಿದ್ರು. ಇದೇ ವೇಳೆ ದೂರುದಾರರ ಪರ ವಕೀಲರು ರಣವೀರ್ ಪತ್ನಿ ದೀಪಿಕಾ ಕೂಡ ಕನ್ನಡದವರು ಆಗಿದ್ದಾರೆ. ಕನ್ನಡ ಬಗ್ಗೆ ತಿಳಿದುಕೊಂಡು ಮಾತನಾಡಬೇಕು ಎಂದು ವಾದ ಮಂಡಿಸಿದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್ ಮುಂದಿನ ಆದೇಶದವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸಿದಂತೆ ಆದೇಶ ಮಾಡಿ ಮುಂದಿನ ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.
ಪೀಠ ಹೇಳಿದ್ದೇನು?
ಸೂಪರ್ ಸ್ಟಾರ್ ಆದರೇನು.. ಕಾನೂನಿನಿಗಿಂತ ಮೇಲಿಲ್ಲ. ಇಲ್ಲಿ ಎರಡು ವಿಚಾರಗಳಿವೆ. ದೇವತೆಯಾದ ಚಾಮುಂಡಿಯ ಪಾತ್ರವನ್ನು ರಿಷಬ್ ಶೆಟ್ಟಿ ನಿಭಾಯಿಸಿದ್ದಾರೆ. ಜನರ ಧಾರ್ಮಿಕ ಭಾವನೆಗಳ ಬಗ್ಗೆ ರಣವೀರ್ಗೆ ಗೊತ್ತಿಲ್ಲದಿರಬಹುದು. ಮಹಿಳಾ ದೆವ್ವ ಎಂದು ಹೇಳಿ ರಿಷಬ್ ಅವರ ನಟನೆಯನ್ನು ಮಿಮಿಕ್ರಿ ಮಾಡಿದ್ದಾರೆ. ಇದು ನಿಜಕ್ಕೂ ಭಾವನೆಗಳಿಗೆ ಘಾಸಿ ಮಾಡಿರುವ ವಿಚಾರ… ಇಷ್ಟು ಹಗುರವಾಗಿ ರಣವೀರ್ ಮಾತನಾಡಬಾರದು. ನೀವು ರಣವೀರ್ ಸಿಂಗ್ ಅಥವಾ ಬೇರಾರೇ ಆದರೂ ಅಷ್ಟು ಹಗುರವಾಗಿ ಮಾತನಾಡಬಾರದು.
ಜನರ ಮೇಲೆ ಪ್ರಭಾವ ಹೊಂದಿರುವ ನಟನಾಗಿ ರಣವೀರ್ ಜವಾಬ್ದಾರಿಯಿಂದ ಇರಬೇಕು. ದೇವರ ಬಗ್ಗೆ ಮಾತನಾಡುವಾಗ ಅವರು ತಿಳಿದುಕೊಂಡು ಮಾತನಾಡಬೇಕಿತ್ತು. ದೈವವನ್ನು ದೆವ್ವ ಎನ್ನಲಾಗದು. ಇನ್ನೊಬ್ಬರ ಭಾವನೆಗೆ ಘಾಸಿ ಮಾಡುವ ಅಧಿಕಾರ ರಣವೀರ್ಗೆ ಇಲ್ಲ. ರಣವೀರ್ ಕ್ಷಮೆ ಕೋರಿರಬಹುದು. ಆದರೆ, ಹೇಳಿದ್ದೆಲ್ಲಾ ಹೊರಟು ಹೋಗುತ್ತದೆಯೇ? ಜನರು ಅದನ್ನು ಮರೆತು ಬಿಡಬಹುದು. ಆದರೆ, ಇಂಟೆರ್ನೆಟ್ ಮರೆಯುವುದಿಲ್ಲ. ವೇದಿಕೆಗೆ ಹೋಗಿ ಇದೆಲ್ಲವನ್ನೂ ಮಾಡುವಾಗ ಕಲಾವಿದರು ಎಚ್ಚರವಹಿಸಬೇಕು. ಅರಿವಿಲ್ಲದೇ ಏನೇನೋ ಮಾತನಾಡಲಾಗದು. ಇದನ್ನು ಇಷ್ಟು ಲಘುವಾಗಿ ಪರಿಗಣಿಸಲಾಗದು ಎಂದಿತು.
ಏತನ್ಮಧ್ಯೆ, ಹೆಚ್ಚುವರಿ ರಾಜ್ಯ ಸಾರ್ವಜನಿಕ ಅಭಿಯೋಜಕ ಬಿ ಎನ್ ಜಗದೀಶ ಅವರು ಎಫ್ಐಆರ್ ದಾಖಲಿಸುವಲ್ಲಿ ಸೂಕ್ತ ವಿಧಾನವನ್ನು ಅನುಸರಿಸಲಾಗಿದೆ ಎಂದು ವಾದಿಸಿದರು. ಇದನ್ನು ಬೇರೆ ಯಾವುದೇ ಪ್ರಕರಣದಂತೆ ಪರಿಗಣಿಸಲಾಗಿಲ್ಲ. ವೇದಿಕೆಯಲ್ಲಿ ರಣವೀರ್ ಹೇಳಿಕೆಯನ್ನು ನಿಲ್ಲಿಸುವಂತೆ ಕೇಳಲಾಯಿತು, ಆದರೂ ಅವರು ಹೇಳಿಕೆ ನೀಡುವುದನ್ನು ಮುಂದುವರಿಸಿದರು. ಆದರೆ, ರಣವೀರ್ ಪರ ವಕೀಲರು ಅದನ್ನು ನಿರಾಕರಿಸಿದರು, ಪ್ರಶ್ನಾರ್ಹ ಹೇಳಿಕೆಯನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ ಎಂದು ಹೇಳಿದರು.
ನಂತರ ನ್ಯಾಯಾಧೀಶರು, ರಣವೀರ್ ಅವರನ್ನು ನಿಲ್ಲಿಸಲು ಯಾರು ಕೇಳಿದರು? ರಿಷಬ್ ಶೆಟ್ಟಿ ಅವರೇ ಅದನ್ನು ನಿಲ್ಲಿಸಲು ಕೇಳಿಕೊಂಡರು, ಹಾಗೆ ಮಾಡಬೇಡಿ ಎಂದು ಹೇಳಿದರು, ಆದರೆ ಅವರು ಮುಂದುವರಿಸಿದರು ಎಂದು ದೂರುದಾರರ ವಕೀಲರು ವಾದಿಸಿದರು.
