Home Uncategorized ‘ಕಾಂತಾರ’ ನೋಡಿ ಬೆಂಗಳೂರಲ್ಲಿ ‘ಕೊರಗಜ್ಜ ನೇಮ’ ಆಚರಣೆಗೆ ನಡೆದಿತ್ತು ಸಿದ್ಧತೆ; ವಿರೋಧ ಹಿನ್ನೆಲೆಯಲ್ಲಿ ಕ್ಯಾನ್ಸಲ್

‘ಕಾಂತಾರ’ ನೋಡಿ ಬೆಂಗಳೂರಲ್ಲಿ ‘ಕೊರಗಜ್ಜ ನೇಮ’ ಆಚರಣೆಗೆ ನಡೆದಿತ್ತು ಸಿದ್ಧತೆ; ವಿರೋಧ ಹಿನ್ನೆಲೆಯಲ್ಲಿ ಕ್ಯಾನ್ಸಲ್

33
0

ರಿಷಬ್ ಶೆಟ್ಟಿ (Rishab Shetty) ನಟನೆಯ ‘ಕಾಂತಾರ’ ಸಿನಿಮಾ ಮಾಡಿದ ಮೋಡಿ ತುಂಬಾನೇ ದೊಡ್ಡದು. ಕರಾವಳಿ ಭಾಗದ ದೈವಾರಾಧನೆ ಹಾಗೂ ಭೂತಾರಾಧನೆ ವಿಚಾರವನ್ನು ಇಡೀ ವಿಶ್ವಕ್ಕೆ ರಿಷಬ್ ಸಿನಿಮಾ ಪರಿಚಯಿಸಿದೆ. ಆಂಧ್ರ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಕಾಂತಾರ’ ಗೆಟಪ್​ನಲ್ಲಿ ಕಾಣಿಸಿಕೊಂಡು ತಹಶೀಲ್ದಾರ್ ಒಬ್ಬರು ಮೊದಲ ಬಹುಮಾನ ಪಡೆದಿದ್ದರು. ಈಗ ತುಳುನಾಡಿನ ಆಚರಣೆಗಳು ಹೊರ ಭಾಗಗಳಿಗೂ ಪಸರಿಸಿವೆ. ಬೆಂಗಳೂರಿನ ಯಲಹಂಕದಲ್ಲಿ ಕೊರಗಜ್ಜ ನೇಮ (Koragajja Nema) ಆಚರಣೆ ಮಾಡಲು ಪ್ಲ್ಯಾನ್ ನಡೆದಿತ್ತು. ಆದರೆ, ತುಳು ನಾಡಿನವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ.

ಬೆಂಗಳೂರಿನ ಯಲಹಂಕದ ಚೊಕ್ಕನಹಳ್ಳಿಯಲ್ಲಿ ಇಂದು (ನವೆಂಬರ್ 26) ಕೆಲವರು ಕೊರಗಜ್ಜ ನೇಮ ಆಚರಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ತುಳುವರಿಂದ ವಿರೋಧ ವ್ಯಕ್ತವಾಯಿತು. ‘ಇದನ್ನು ನಾವು ಸ್ವಾಗತಿಸುವುದಿಲ್ಲ. ಈ ರೀತಿಯ ಕಾರ್ಯಕ್ರಮಗಳಿಂದ ಸಂಘಟಕರು ಹಣ ಮಾಡುತ್ತಿದ್ದಾರೆ. ದೈವಾರಾಧನೆ ಎಂದರೆ ದೇವತಾರಾಧನೆ ಎಂದರ್ಥ. ದೇವತೆ ನೆಲೆಸಿರುವ ಭೂಮಿಯಲ್ಲಿ ಮಾತ್ರ ಅದನ್ನು ಮಾಡಬೇಕು’ ಎಂದು ತುಳು ನಾಡಿನ ಮಂದಿ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರಗಜ್ಜ ನೇಮ ಕ್ಯಾನ್ಸಲ್ ಮಾಡಲಾಗಿದೆ.

ರಿಷಬ್ ಶೆಟ್ಟಿ ಕೂಡ ದೈವಾರಾಧನೆ ಬಗ್ಗೆ ಮಾತನಾಡಿದ್ದರು. ‘ಕಾಂತಾರ’ ಸಿನಿಮಾದಲ್ಲಿ ದೈವ ದೊಡ್ಡದಾಗಿ ‘ವೋ..’ ಎಂದು ಕೂಗುವ ದೃಶ್ಯ ಬರುತ್ತದೆ. ಇದನ್ನು ಅನೇಕರು ಅನುಕರಣೆ ಮಾಡಿದ್ದರು. ‘ಆ ರೀತಿ ಮಾಡಬಾರದು. ಅದಕ್ಕೆ ಅದರದ್ದೇ ಆದ ಗೌರವ ಇದೆ’ ಎಂದು ರಿಷಬ್ ಶೆಟ್ಟಿ ಅವರು ಅಭಿಪ್ರಾಯಪಟ್ಟಿದ್ದರು.

ಕೊರಗಜ್ಜನ ಕುರಿತು ಸಿನಿಮಾ

ಕೊರಗಜ್ಜ ದೈವದ ಕುರಿತು ಹೊಸ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ ‘ಕರಿ ಹೈದ ಕರಿ ಅಜ್ಜ’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ. ‘ಕರಿ ಹೈದ ಕರಿ ಅಜ್ಜ’ ಚಿತ್ರದ ಮೂಲಕ ಕೊರಗಜ್ಜ ದೈವದ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಲು ಚಿತ್ರತಂಡ ಮುಂದಾಗಿದೆ. ಈ ಸಿನಿಮಾದಲ್ಲಿ ಕಬೀರ್​ ಬೇಡಿ, ಶ್ರುತಿ, ಭವ್ಯ ಮುಂತಾದ ಖ್ಯಾತ ಕಲಾವಿದರು ನಟಿಸಲಿರುವುದು ವಿಶೇಷ. ‘ಕರಿ ಹೈದ ಕರಿ ಅಜ್ಜ’ ಚಿತ್ರವು ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಮೂಲಕ ನಿರ್ಮಾಣ ಆಗಲಿದೆ. ತ್ರಿವಿಕ್ರಮ್ ಸಪಲ್ಯ ಅವರು ಬಂಡವಾಳ ಹೂಡುತ್ತಿದ್ದಾರೆ. ಸುಧೀರ್ ಅತ್ತಾವರ್ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನಡೆಯಿತು. ಬೆಳ್ತಂಗಡಿ ತಾಲೂಕಿನ  ಬಳ್ಳಮಂಜದ ಇತಿಹಾಸ ಪ್ರಸಿದ್ಧ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಶಾಸಕ ಶ್ರೀ ಹರೀಶ್ ಪೂಂಜ ಅವರು ಕ್ಯಾಮೆರಾ ಚಾಲನೆ ಮಾಡುವುದರ ಮೂಲಕ ಚಿತ್ರದ ಕೆಲಸಗಳಿಗೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here