ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಮನಗರ/ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ವಿರೂಪಸಂದ್ರ ಗ್ರಾಮದಲ್ಲಿ ಮಾವಿನ ತೋಟ ಕಾಯುತ್ತಿದ್ದ ವೀರಭದ್ರಯ್ಯ ಅವರು ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಅವರು, ಕಾಡಂಚಿನಲ್ಲಿ ರೈತರು ಆತಂಕ, ಭಯದಿಂದ ಬದುಕುವಂತಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ವೈಜ್ಞಾನಿಕವಾಗಿ ಬೇಲಿ ನಿರ್ಮಾಣ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಸಚಿವರು ಈಗಾಗಲೇ ಘೋಷಿಸಿರುವಂತೆ, ಕೂಡಲೇ ನೊಂದ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ಹಸ್ತಾಂತರ ಮಾಡಬೇಕು ಹಾಗೂ ಕಾಡಂಚಿನಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ವಹಿಸಿ ಜನರ ಮೇಲೆ ಕಾಡುಪ್ರಾಣಿಗಳ ದಾಳಿ ಆಗದಂತೆ ಶಾಶ್ವತವಾಗಿ ತಡೆಯುವ ಎಲ್ಲಾ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.4/4
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 3, 2023
ಅನೆ ದಾಳಿಯಿಂದ ರೈತ ವೀರಭದ್ರಯ್ಯ ಅಸುನೀಗಿದ ವಾರ್ತೆ ಕೇಳಿ ಬಹಳ ದುಃಖ ಉಂಟಾಯಿತು. ಮೃತ ರೈತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಆ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಅವರು ನೊಂದ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಅರಣ್ಯ ಸಂರಕ್ಷಣೆ ಜತೆಗೆ ಕಾಡಿನ ಅಕ್ಕಪಕ್ಕ ಬೇಸಾಯ ಮಾಡುವ ರೈತರ ಹಿತವೂ ಮುಖ್ಯ. ರೈತಾಪಿ ಜನರ ಜೀವ ಅಮೂಲ್ಯ. ಈ ಕಾರಣಕ್ಕಾಗಿ ಅರಣ್ಯ ವಲಯದಲ್ಲಿ ವೈಜ್ಞಾನಿಕ ಬೇಲಿ ನಿರ್ಮಾಣ ಮಾಡಬೇಕು ಎಂದು ನಾನು ಅನೇಕ ಸಲ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದೇನೆ. ಈ ಬಗ್ಗೆ ಇನ್ನಷ್ಟು ವಿಳಂಬ ಮಾಡಬಾರದು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದಾರೆ.
ಚನ್ನಪಟ್ಟಣ ಮಾತ್ರವಲ್ಲದೆ, ರಾಮನಗರ ಜಿಲ್ಲೆಯ ನಾನಾ ಭಾಗಗಳಲ್ಲಿ ಜನರ ಮೇಲೆ ಕಾಡುಪ್ರಾಣಿಗಳು ದಾಳಿ ನಡೆಸುವ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಕೂಡಲೇ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವರು ಈಗಾಗಲೇ ತಿಳಿಸಿರುವಂತೆ, ಕೂಡಲೇ ನೊಂದ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ಹಸ್ತಾಂತರ ಮಾಡಬೇಕು ಹಾಗೂ ಕಾಡಂಚಿನಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ವಹಿಸಿ ಜನರ ಮೇಲೆ ಕಾಡುಪ್ರಾಣಿಗಳ ದಾಳಿ ಆಗದಂತೆ ಶಾಶ್ವತವಾಗಿ ತಡೆಯುವ ಎಲ್ಲಾ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಅವರು ಒತ್ತಾಯ ಮಾಡಿದ್ದಾರೆ.