ಕಾರುಗಳಲ್ಲಿ ಸ್ಟಂಟ್ ಗಳನ್ನು ಮಾಡುತ್ತಿದ್ದ ನಾಲ್ವರ ವಿರುದ್ಧ ಕಾಪು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಪು: ಕಾರುಗಳಲ್ಲಿ ಸ್ಟಂಟ್ ಗಳನ್ನು ಮಾಡುತ್ತಿದ್ದ ನಾಲ್ವರ ವಿರುದ್ಧ ಕಾಪು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮೂಡಬೆಟ್ಟು-ಮೂಲೂರು ನಡುವೆ ಕಾರಿನಲ್ಲಿ ನಾಲ್ವರು ಯುವಕರು ಸ್ಟಂಟ್ಸ್ ಮಾಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿತ್ತು.
ಉದ್ಯಾವರದ ಅಯಾನ್ (24), ಕುಂಜಿಬೆಟ್ಟುವಿನ ಮಿಶಾಲ್ವುದ್ದೀನ್ (23), ಉಡುಪಿಯ ಶಾನೂನ್ ಡಿಸೋಜಾ (25) ಮತ್ತು ವಿವೇಕ್ (23) ವಿರುದ್ಧ ಐಪಿಸಿ ಸೆಕ್ಷನ್ 279 ಮತ್ತು 336 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಪು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಕಾನೂನು ಮತ್ತು ಸುವ್ಯವಸ್ಥೆ) – ಸುಮಾ ಬಿ ಅವರಿಗೆ ಬಂದ ಕರೆಯಲ್ಲಿ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಎನ್ಎಚ್ 66 ರಲ್ಲಿ ನಾಲ್ಕು ಕಾರುಗಳನ್ನು ಅಜಾಗರೂಕತೆಯಿಂದ ಚಲಾಯಿಸಿದ ವೈರಲ್ ವೀಡಿಯೊದ ಬಗ್ಗೆ ಮಾಹಿತಿ ನೀಡಲಾಗಿತ್ತು.
ಇದನ್ನೂ ಓದಿ: ಮಂಗಳೂರು: ಗೂಡ್ಸ್ ರೈಲಿಗೆ ಸಿಲುಕಿ 17 ಎಮ್ಮೆಗಳು ಸಾವು
ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಮೂಡಬೆಟ್ಟು-ಮೂಳೂರು ನಡುವೆ ನಾಲ್ವರು ಆರೋಪಿಗಳಿಂದ ಸ್ಟಂಟ್ಸ್ ನಡೆದಿರುವುದು ದೃಢಪಟ್ಟಿದೆ. ಅದರಂತೆ ಪೊಲೀಸರು ವಾಹನಗಳನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.
ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ 29 ಸೆಕೆಂಡ್ಗಳಷ್ಟಿದ್ದು, ನಾಲ್ಕು ಕಾರುಗಳ ಚಾಲಕರು ಪರಸ್ಪರರ ರೇಸಿಂಗ್ ನಲ್ಲಿ ತೊಡಗಿದ್ದರು. ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರ ಪರಿಣಾಮ ಇತರರ ಜೀವಕ್ಕೆ ಅಪಾಯ ಉಂಟಾಗಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಒಂದು ಹಂತದಲ್ಲಿ, ಮಹೀಂದ್ರಾ ಜೀಪ್ (ಕೆಎ 20 ಎಂಡಿ 6767) ಚಾಲಕ – ಆರೋಪಿ ಮಿಶಾಲ್ವುದ್ದೀನ್ ಬಲಭಾಗದ (ಮುಂಭಾಗ ಮತ್ತು ಹಿಂಬದಿ) ಚಕ್ರಗಳ ಮೂಲಕ ಜಿಗಿಯುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಸಾರ್ವಜನಿಕ ರಸ್ತೆಯಲ್ಲಿ (ಎನ್ ಎಚ್ 66) ಮಾಡಿರುವ ಸ್ಟಂಟ್ಸ್ ಅಪಾಯಕಾರಿ ಎನಿಸಿತ್ತು. ತನಿಖೆ ಪ್ರಗತಿಯಲ್ಲಿದೆ.