ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದ ಕಾರಣ ಮೂರು ತಿಂಗಳ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಕಾರವಾರದ ಕಿನ್ನಾರ ಗ್ರಾಮದಲ್ಲಿ ನಡೆದಿದೆ. ಕಾರವಾರ: ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದ ಕಾರಣ ಮೂರು ತಿಂಗಳ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಕಾರವಾರದ ಕಿನ್ನಾರ ಗ್ರಾಮದಲ್ಲಿ ನಡೆದಿದೆ.
ಕಫ ಸಮಸ್ಯೆಯಿಂದಾಗಿ ಮಗುವನ್ನು ಕಳೆದ 3 ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪೀಡಿಯಾಟ್ರಿಕ್ಸ್ ಐಸಿಯುವಿನಲ್ಲಿ ಹಸುಗೂಸಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಮಗುವಿಗೆ ಉಸಿರಾಟ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆಯಲ್ಲಿ ನ್ಯುಮೋನಿಯಾ ಇರುವುದು ಖಚಿತವಾಗಿತ್ತು. ಮಗುವಿನ ಸ್ಥಿತಿ ಗಂಭೀರವಾಗಿತ್ತು.
ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ಪೀಡಿಯಾಟ್ರಿಕ್ ವಿಭಾಗದ ಮುಖ್ಯಸ್ಥ ರಾಜ್‌ಕುಮಾರ್ ಮಲಿವಾಲ್ ಮಾತನಾಡಿ, “ಮಗುವಿನ ಸ್ಥಿತಿ ಗಂಭೀರವಾಗಿತ್ತು. ಇದನ್ನು ಪೋಷಕರ ಗಮನಕ್ಕೆ ತರಲಾಗಿತ್ತು. ಆದರೂ ಪೋಷಕರು ಹೆಚ್ಚಿನ ಚಿಕಿತ್ಸೆಗೆ ಉಡುಪಿಗೆ ಕರೆದೊಯ್ಯಲು ನಿರ್ಧರಿಸಿದ್ದರು. ಮಗುವನ್ನು ಸ್ಥಳಾಂತರಿಸಬೇಕೆಂದರೆ, ವೆಂಟಿಲೇಟರ್ ವುಳ್ಳ ಆ್ಯಂಬುಲೆನ್ಸ್ ನಲ್ಲಿಯೇ ಕರೆದೊಯ್ಯಬೇಕೆಂದು ತಿಳಿಸಿದ್ದೆವು. ಆದರೆ, ವೆಂಟಿಲೇಟರ್ ಅಳವಡಿತ ಆ್ಯಂಬುಲೆನ್ಸ್ ನಮ್ಮಲ್ಲಿ ಲಭ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಪೋಷಕರು ಉಡುಪಿಯಿಂದಲೇ ಆ್ಯಂಬುಲೆನ್ಸ್ ತರಿಸಿದ್ದರು. ಆದರೆ, ಆ್ಯಂಬುಲೆನ್ಸ್ ಸೂಕ್ತ ಸಮಯಕ್ಕೆ ಬಾರದ ಕಾರಣ ಮಗು ಸಾವನ್ನಪ್ಪಿದೆ.
ಈ ನಡುವೆ ಅವ್ಯವಸ್ಥೆ ವಿರುದ್ಧ ಆಕ್ರೋಶಗೊಂಡ ಪಾಲಕರು, ಆಸ್ಪತ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.