Home Uncategorized ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್: ಮುಕ್ತ ಮಾರುಕಟ್ಟೆಗಿಂತ ದುಪ್ಪಟ್ಟು ದರದಲ್ಲಿ ಖರೀದಿ ಆರೋಪ

ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್: ಮುಕ್ತ ಮಾರುಕಟ್ಟೆಗಿಂತ ದುಪ್ಪಟ್ಟು ದರದಲ್ಲಿ ಖರೀದಿ ಆರೋಪ

23
0

ಬೆಂಗಳೂರು, ಜ.19: ಬಿಜೆಪಿ ಸರಕಾರದ ಅವಧಿಯಲ್ಲಿ ಲ್ಯಾಪ್‌ಟಾಪ್ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಬಲವಾಗಿ ಆರೋಪಿಸುತ್ತಲೇ ಬಂದಿದ್ದ ಕಾಂಗ್ರೆಸ್ ಪಕ್ಷವು ಇದೀಗ ತನ್ನದೇ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಮುಕ್ತ ಮತ್ತು ಆನ್‌ಲೈನ್ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಲ್ಯಾಪ್‌ಟಾಪ್ ಖರೀದಿಸಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಬೆಳಗಾವಿ, ಕಲಬುರಗಿ, ಹಾಸನ, ಬೆಂಗಳೂರು-1, ಬೆಂಗಳೂರು-2 ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ತಲಾ 1,400 ಲ್ಯಾಪ್‌ಟಾಪ್‌ಗಳಂತೆ ಒಟ್ಟು 7,000 ಲ್ಯಾಪ್‌ಟಾಪ್‌ಗಳನ್ನು 49.75 ಕೋಟಿ ರೂ. ದರದಲ್ಲಿ ಖರೀದಿಸಿದೆ. ಎಲ್-1 ಆಗಿ ಹೊರಹೊಮ್ಮಿದ್ದ ಕಂಪೆನಿಯು ನಮೂದಿಸಿದ್ದ ದುಪ್ಪಟ್ಟು ದರವನ್ನೇ ಅನುಮೋದಿಸುವ ಮೂಲಕ 23.15 ಕೋಟಿ ರೂ. ಹಗರಣಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹನುಮಂತ ಪೂಜಾರಿ ಎಂಬವರು ಆರ್‌ಟಿಐ ಅಡಿಯಲ್ಲಿ ಸಮಗ್ರ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಇದರ ಪ್ರತಿಗಳು ‘The-file.in’ಗೆ ಲಭ್ಯವಾಗಿವೆ.

ವಾಸ್ತವದಲ್ಲಿ ಈ ಟೆಂಡರ್ ಪ್ರಕ್ರಿಯೆಯು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬಹುತೇಕ ಅಂತಿಮಗೊಂಡಿದ್ದರೂ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಆರ್ಥಿಕ ಬಿಡ್ ನಡವಳಿ ಅನುಮೋದನೆಗೊಂಡಿರಲಿಲ್ಲ. ಆದರೆ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಮಂಡಳಿಯು ಆರ್ಥಿಕ ಬಿಡ್ ತೆರೆದಿತ್ತಲ್ಲದೇ 2023ರ ಜುಲೈ 24ರಂದು ಮಂಡಳಿ ಅಧಿಕಾರಿಗಳು ಅನುಮೋದಿಸಿದ್ದರು. ಇದಕ್ಕೆ ಸಚಿವ ಸಂತೋಷ್ ಲಾಡ್ ಅವರ ಒಪ್ಪಿಗೆ ಪಡೆಯಲಾಗಿತ್ತು ಎಂದು ತಿಳಿದು ಬಂದಿದೆ.

ಡೆಲ್, ಲೆನವೋ, ಎಚ್‌ಪಿಯಂತಹ ಕಂಪೆನಿಗಳು ತಯಾರಿಸಿರುವ ಲ್ಯಾಪ್‌ಟಾಪ್‌ಗಳ ದರಕ್ಕೂ ಮತ್ತು ಎಲ್-1 ಆಗಿ ಹೊರಹೊಮ್ಮಿರುವ ನೈನ್ರಿಚ್ ಇನ್ಫೋಟೆಕ್ ಕಂಪೆನಿಯು ನಮೂದಿಸಿರುವ ದರದ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಮಂಡಳಿಯು ನಿಗದಿಪಡಿಸಿದ್ದ ತಾಂತ್ರಿಕ ನಿರ್ದಿಷ್ಟತೆಗಳನ್ನೇ ಹೊಂದಿರುವ ಪ್ರತಿಷ್ಠಿತ ಕಂಪೆನಿಗಳು ತಲಾ ಲ್ಯಾಪ್‌ಟಾಪ್‌ಗೆ ಕನಿಷ್ಠ 27,999 ರೂ.ಗಳಿಂದ ಗರಿಷ್ಠ 35,999 ರೂ.ಗಳವರೆಗೆ ಇದೆ. ಆದರೆ ನೈನ್ ರಿಚ್ ಇನ್ಫೋಟೆಕ್ ಕಂಪೆನಿಯು ಲ್ಯಾಪ್‌ಟಾಪ್‌ನ ತಲಾ ಬೆಲೆಯನ್ನು ನಮೂದಿಸಿಲ್ಲ. ಬದಲಿಗೆ ಒಟ್ಟಾರೆ 1,400 ಲ್ಯಾಪ್‌ಟಾಪ್‌ಗಳಿಗೆ 9,94,64,499 ರೂ. ಎಂದು ನಮೂದಿಸಿದೆ. ಇದರ ಪ್ರಕಾರ ತಲಾ ಲ್ಯಾಪ್‌ಟಾಪ್‌ಗೆ 71,046 ರೂ.ನಂತೆ 49.75 ಕೋಟಿ ರೂ. ಆಗಲಿದೆ. ಹನುಮಂತ ಪೂಜಾರಿ ಅವರು 2024ರ ಜನವರಿ 16ರಂದು ಖಾಸಗಿ ಕಂಪೆನಿಯೊಂದರಿಂದ ಪಡೆದಿರುವ ದರಪಟ್ಟಿ ಪ್ರಕಾರ ತಲಾ ಲ್ಯಾಪ್‌ಟಾಪ್‌ಗೆ 38,000 ರೂ. ಇದೆ. ಈ ದರದ ಪ್ರಕಾರ 1,400 ಲ್ಯಾಪ್‌ಟಾಪ್‌ಗಳಿಗೆ 5.32 ಕೋಟಿ ರೂ.ನಂತೆ 26.60 ಕೋಟಿ ರೂ. ಆಗಲಿದೆ. ತಲಾ ಲ್ಯಾಪ್‌ಟಾಪ್‌ವೊಂದಕ್ಕೆ 33,046 ರೂ. ನಂತೆ ಒಟ್ಟಾರೆ 23.15 ಕೋಟಿ ರೂ. ಅಧಿಕ ದರ ಪಾವತಿಸಿ ಖರೀದಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

9,94,64,499 ರೂ. ನಮೂದಿಸಿ ಎಲ್-1 ಆಗಿರುವ ನೈನ್ರಿಚ್ ಇನ್ಫೋಟೆಕ್ ಕಂಪೆನಿ ಜತೆ ಮಂಡಳಿಯು 2023ರ ಆಗಸ್ಟ್ 11ರಂದು ಕರಾರು ಮಾಡಿಕೊಂಡಿದೆ. ಆಗಸ್ಟ್ 17ರಂದು ಪೂರೈಕೆ ಆದೇಶ ನೀಡಿದೆ. ಲ್ಯಾಪ್‌ಟಾಪ್ ಖರೀದಿ ಸಂಬಂಧ ಕರೆದಿದ್ದ ಟೆಂಡರ್‌ನಲ್ಲಿ ಒಟ್ಟು ಮೂರು ಕಂಪೆನಿಗಳು ಭಾಗವಹಿಸಿದ್ದವು. ಅದರಲ್ಲಿ ನೈನ್ ರಿಚ್ ಇನ್ಫೋಟೆಕ್ ಕಂಪೆನಿಯು 9,94,64,499 ರೂ., ಎನ್‌ಡಿ ಮ್ಯಾನೇಜ್ಮೆಂಟ್ 10,04,99,999 ರೂ., ವಾಂಟೇಜ್ ನೆಟ್ವರ್ಕ್ ಸಲ್ಯೂಷನ್ಸ್ 10,25,99,000 ರೂ.ಗಳನ್ನು ನಮೂದಿಸಿತ್ತು. ಆದರೆ ಈ ಮೂರು ಕಂಪೆನಿಗಳೂ ತಲಾ ಲ್ಯಾಪ್‌ಟಾಪ್ ದರವನ್ನು ನಮೂದಿಸಿರಲಿಲ್ಲ ಎಂಬುದು ನಡವಳಿಯಿಂದ ಗೊತ್ತಾಗಿದೆ.

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಖರೀದಿ ಪ್ರಕ್ರಿಯೆಯಲ್ಲಿಯೂ ಹಿಂದಿನ ಸರಕಾರದ ಅವಧಿಯಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯು ಖಾಸಗಿ ಏಜೆನ್ಸಿಗಳ ಲಾಬಿಗೆ ಮಣಿದಿತ್ತು ಟೆಂಡರ್ ಪ್ರಕ್ರಿಯೆ ಮತ್ತು ಸಚಿವ ಸಂಪುಟದ ಅನುಮೋದನೆ ಪಡೆಯುವುದರಿಂದ ತಪ್ಪಿಸಿಕೊಳ್ಳಲು ಖರೀದಿಯ ಒಟ್ಟು ಮೊತ್ತವನ್ನು ವಿಭಜಿಸಿ ತುಂಡು ಗುತ್ತಿಗೆ ನೀಡಲು ಅಧಿಕಾರಿಗಳು ಮುಂದಾಗಿದ್ದರು.

ಖಾಸಗಿ ಏಜೆನ್ಸಿಗಳೊಂದಿಗೆ ಕೈಜೋಡಿಸಿ ಕರ್ನಾಟಕ ಪಾರದರ್ಶಕ ಕಾಯ್ದೆಯನ್ನೇ ಗಾಳಿಗೆ ತೂರಿರುವ ತಾಂತ್ರಿಕ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ(ಎಸ್ಸಿಪಿ, ಎಸ್ಟಿಪಿ)ಯಡಿಯಲ್ಲಿ ಲಭ್ಯ ಇರುವ 18.34 ಕೋಟಿ ರೂ. ಸೇರಿದಂತೆ ಒಟ್ಟು 27.86 ಕೋಟಿ ರೂ. ಅನುದಾನ ಬಳಸಿಕೊಂಡಿದ್ದರು. ಅಲ್ಲದೆ ಆಡಳಿತಾತ್ಮಕ ಅನುಮೋದನೆ ಇಲ್ಲದೆಯೇ ಟೆಂಡರ್ ಕರೆದಿರುವ ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸಚಿವ ಸಂಪುಟವನ್ನೂ ಕತ್ತಲಲ್ಲಿಟ್ಟಿದ್ದರು.

ಹಿಂದಿನ ಸರಕಾರದ ಅವಧಿಯ ಲ್ಯಾಪ್‌ಟಾಪ್ ಖರೀದಿಯಲ್ಲಾಗಿರುವುದೇನು?

ಈ ಪೈಕಿ 5,360 ಸಂಖ್ಯೆಯ ಲ್ಯಾಪ್‌ಟಾಪ್ ಖರೀದಿಗೆ ಕ್ರಿಯಾಯೋಜನೆಗೆ ಅನುಮೋದನೆಯನ್ನು ತಾಂತ್ರಿಕ ಶಿಕ್ಷಣ ಇಲಾಖೆ ಪಡೆದುಕೊಂಡಿದೆ. ಲ್ಯಾಪ್‌ಟಾಪ್‌ವೊಂದಕ್ಕೆ 34,220 ರೂ. ದರದ ಪ್ರಕಾರ ಒಟ್ಟು 4.04 ಕೋಟಿ ರೂ. ಮೊತ್ತದಲ್ಲಿ 1,180 ಲ್ಯಾಪ್‌ಟಾಪ್‌ಗಳ ಖರೀದಿಸಲು ಅನುಮೋದನೆಗೆ ಸರಕಾರಕ್ಕೆ ಪತ್ರ ಬರೆದಿತ್ತು.

ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿಯಲ್ಲಿ 5,075 ಲ್ಯಾಪ್‌ಟಾಪ್‌ಗಳ ಖರೀದಿಗೆ ಅವಕಾಶ ಕಲ್ಪಿಸಿದೆಯಾದರೂ ಈ ಪೈಕಿ 1,084 ಲ್ಯಾಪ್‌ಟಾಪ್‌ಗಳನ್ನು ಮಾತ್ರ ಖರೀದಿಸಲು ಅಧಿಕಾರಿಗಳು ತಯಾರಿ ನಡೆಸಿದ್ದರು. ಇನ್ನು 3,991 ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು 2019-20ನೇ ಸಾಲಿಗೆ ಕ್ರಿಯಾಯೋಜನೆಗೆ ಅನುಮತಿ ಕೊಟ್ಟಲ್ಲಿ ಉಳಿತಾಯವಾಗಬಹುದಾದ ಒಟ್ಟು 11.95 ಕೋಟಿ ರೂ.ಗಳಿಂದ 3,991 ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಪ್ರಕ್ರಿಯೆ ನಡೆದಿತ್ತು.

LEAVE A REPLY

Please enter your comment!
Please enter your name here