ಪ್ರತಿಯೊಬ್ಬ ರೈತರಿಗೂ ಅನಕೂಲವಾಗುವಂತಹ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಲು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುತ್ತಿದ್ದ 4 ಸಾವಿರ ರೂ ಯೋಜನೆ ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದರು. ಬೆಂಗಳೂರು: ಪ್ರತಿಯೊಬ್ಬ ರೈತರಿಗೂ ಅನಕೂಲವಾಗುವಂತಹ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಲು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುತ್ತಿದ್ದ 4 ಸಾವಿರ ರೂ ಯೋಜನೆ ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದರು.
ವಿಧಾನಸಭಾ ಅಧಿವೇಶನದಲ್ಲಿ ಮಂಗಳವಾರ ಬಿಜೆಪಿ ಶಾಸಕ ಸುರೇಶ್ ಶೆಟ್ಟಿಯವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಕಿಸಾನ್ ಸಮ್ಮಾನ್ ಯೋಜನೆಯಡಿ 51 ಲಕ್ಷ ರೈತರಿಗೆ ಮಾತ್ರ ಅನುಕೂಲವಾಗುತ್ತದೆ. ಎಲ್ಲಾ ರೈತರಿಗೂ ಈ ಯೋಜನೆ ಲಾಭ ಸಿಗುತ್ತಿಲ್ಲ ಎಂದು ಪ್ರತಿಪಾದಿಸಿದರು. ರಾಜ್ಯದಲ್ಲಿ 87 ಲಕ್ಷ ಕುಟುಂಬಗಳಿವೆ, ಆದರೆ ಎಲ್ಲರಿಗೂ ಉಪಯೋಗವಾಗುತ್ತಿಲ್ಲ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರ ನಿಲ್ಲಿಸಿದ್ದ ಕೃಷಿ ಭಾಗ್ಯ ಯೋಜನೆ ಮತ್ತೆ ಜಾರಿ ಮಾಡಲಾಗಿದ್ದು, ಸಹಕಾರ ಸಂಘದ ಮೂಲಕ ರೈತರಿಗೆ ಶೂನ್ಯ ಬಡ್ಡಿ ದರದ ಸಾಲವನ್ನು 5 ಲಕ್ಷ ರೂಗೆ ಹೆಚ್ಚಿಸಲಾಗಿದೆ, 45,000-50,000 ಕೋಟಿ ರೂ. ವಾರ್ಷಿಕ ವೆಚ್ಚದ ಗ್ಯಾರಂಟಿ ಯೋಜನೆಗಳ ಲಾಭ ರೈತರಿಗೆ ಸಿಗುತ್ತಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2019 ರ ಫೆಬ್ರವರಿ 01ರಂದು ಆರಂಭವಾಗಿದ್ದು. ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ವಾರ್ಷಿಕ 6 ಸಾವಿರ ರೂ. ನೀಡಿದರೆ, ಕರ್ನಾಟಕ ಸರ್ಕಾರವು ರಾಜ್ಯದ ಅರ್ಹ ಫಲಾನುಭವಿಗಳಿಗೆ ವಾರ್ಷಿಕ ತಲಾ 4,000 ರೂ. ಧನ ಸಹಾಯ ನೀಡುತ್ತಿದೆ. 5 ವರ್ಷ ಅವಧಿಯ ಯೋಜನೆ ಇದ್ದಾಗಿದ್ದು, 2024 ಫೆಬ್ರವರಿ 01ಕ್ಕೆ ಅಂತ್ಯವಾಗುತ್ತದೆ.
ಐದು ಗ್ಯಾರಂಟಿಗಳ ಜಾರಿಗೆ ತಗಲುವ ಬೃಹತ್ ಮೊತ್ತಕ್ಕೆ ಬಜೆಟ್‌ನಲ್ಲಿ ಅನುದಾನ ಒದಗಿಸಿರುವ ರಾಜ್ಯ ಸರಕಾರ, ಆರ್ಥಿಕ ಹೊರೆ ನಿಭಾಯಿಸಲು ನಾನಾ ಇಲಾಖೆಗಳ ಅನುದಾನಕ್ಕೆ ಕತ್ತರಿ ಪ್ರಯೋಗಿಸಿದೆ. ಅದರಂತೆ ಕಿಸಾನ್ ಸಮ್ಮಾನ್ ಯೋಜನೆಯಡಿ ನೆರವು ನೀಡುವುದನ್ನು ಕೈಬಿಡಲು ನಿರ್ಧರಿಸಿದಂತಿದೆ.