ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರಗತಿಯಲ್ಲಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಅವರು ಗುರುವಾರ ಸೂಚನೆ ನೀಡಿದರು. ಬೀದರ್: ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರಗತಿಯಲ್ಲಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಅವರು ಗುರುವಾರ ಸೂಚನೆ ನೀಡಿದರು.
ನಿನ್ನೆಯಷ್ಟೇ ಸಚಿವರು ಕಲುಷಿತ ನೀರು ಸೇವಿಸಿ 20 ಮಂದಿ ಅಸ್ವಸ್ಥಗೊಂಡಿದ್ದ ಕಮಲನಗರ ತಾಲೂಕಿನ ಕರ್ಕ್ಯಾಲ್ ಗ್ರಾಮಕ್ಕೆ ಭೇಟಿ ನೀಡಿದರು.
ಗ್ರಾಮ ಭೇಟಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಶುದ್ಧ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡುವುದು ಸರಕಾರದ ಕರ್ತವ್ಯ. ಈ ಬಾರಿ ಮಳೆ ಇನ್ನು ಆರಂಭವಾಗದ ಕಾರಣ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಸಮಸ್ಯೆಯನ್ನು ಕೂಡಲೇ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೀದರ್ ಉದ್ಯಾನ ನಗರಿ ಮಾಡಲು ಬಯಸಿದ್ದೇನೆ. ಜುಲೈ 1 ರಂದು ‘ವನಮಹೋತ್ಸವ’ ಆಚರಿಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಸುಮಾರು 2 ರಿಂದ 3 ಲಕ್ಷ ಮರಗಳನ್ನು ನೆಡಲಾಗುತ್ತದ ಎಂದು ಹೇಳಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಔರಾದ್ ತಾಲೂಕಿನ ನಾಲ್ಕು ತಾಂಡಾಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದ್ದು, 51 ಗ್ರಾಮಗಳನ್ನು ಬರಪೀಡಿತ ಎಂದು ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಎಸ್ಪಿ ಚನ್ನಬಸವಣ್ಣ ಎಸ್.ಲಂಗೋಟಿ, ಎಂಎಲ್ಸಿ ಅರವಿಂದಕುಮಾರ ಅರಳಿ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.