ಕಾರವಾರ: ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಕುಮಟಾ ಪಟ್ಟಣದ ಕೊಪ್ಪಳಕರವಾಡಿಯಲ್ಲಿ ನೆಲೆಸಿರುವ ಶಾಸಕ ದಿನಕರ ಶೆಟ್ಟಿ ಅವರ ಸಹೋದರ ಮಧುಕರ ಶೆಟ್ಟಿ ಅವರ ಮನೆಯಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ.
ಮನೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಮನೆಯಲ್ಲಿದ್ದವರು ಹೊರ ಓಡಿ ಬಂದಿದ್ದು, ತಕ್ಷಣ ಅಗ್ನಿಶಾಮಕ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ಆರಿಸಿದ್ದಾರೆ. ಬೆಂಕಿಯಿಂದಾಗಿ ಗೋಡೆಗಳಿಗೆ ಹಾನಿ ಉಂಟಾಗಿದ್ದು, ಅಡುಗೆ ಮನೆಯಲ್ಲಿನ ಸಾಮಗ್ರಿಗಳು ಹಾನಿಗೊಳಗಾಗಿದೆ.