ಇಂಜಿನಿಯರಿಂಗ್ ಕೋರ್ಸ್ ಗಳಿಗೆ 2023-24 ನೇ ಸಾಲಿನಲ್ಲಿ ಪ್ರವೇಶ ಪಡೆಯಲು ಬಯಸುವವರಿಗೆ ಸಂಯೋಜಿತ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಘೋಷಿಸಿದೆ. ಬೆಂಗಳೂರು: ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಹಾಗೂ ನರ್ಸಿಂಗ್ ಕೋರ್ಸ್ ಗಳಿಗೆ 2023-24 ನೇ ಸಾಲಿನಲ್ಲಿ ಪ್ರವೇಶ ಪಡೆಯಲು ಬಯಸುವವರಿಗೆ ಸಂಯೋಜಿತ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಘೋಷಿಸಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್ ರಮ್ಯಾ ಈ ಬಗ್ಗೆ ಮಾಹಿತಿ ನೀಡಿದೊದು, ಇದು ಅತ್ಯಂತ ಪ್ರಮುಖ ಸುಧಾರಣೆಯಾಗಿದ್ದು, ಇದರಿಂದ ಕೌನ್ಸಿಲಿಂಗ್ ಪ್ರಕ್ರಿಯೆ ಸುಗಮಗೊಳ್ಳಲಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೀಟು ಹಂಚಿಕೆಯಲ್ಲಿ ಅನಗತ್ಯ ವಿಳಂಬವನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಈ ಹಿಂದೆ ಪ್ರತಿಯೊಂದು ಕೋರ್ಸ್ ಗಳಿಗೂ ಪ್ರತ್ಯೇಕ ಕೌನ್ಸಿಲಿಂಗ್ ಸುತ್ತುಗಳಿರುತ್ತಿತ್ತು. ಹಲವು ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸೀಟುಗಳ ಕೌನ್ಸಿಲಿಂಗ್ ನಲ್ಲಿ ಭಾಗವಹಿಸುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ ಒಬ್ಬ ವಿದ್ಯಾರ್ಥಿಗೆ ಎರಡೂ ಕೋರ್ಸ್ ಗಳಲ್ಲಿ ಸೀಟು ಸಿಗುವ ಸಾಧ್ಯತೆ ಇರುತ್ತಿತ್ತು. ಈ ರೀತಿಯಾದಾಗ ಹಲವು ಅರ್ಹ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದರು. ಆಗ ಪ್ರಾಧಿಕಾರ ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳ ಇಂಜಿನಿಯರಿಂಗ್ ಸೀಟುಗಳನ್ನು ರದ್ದುಗೊಳಿಸಬೇಕಾಗುತ್ತಿತ್ತು.
ಇದನ್ನೂ ಓದಿ: ಡೆಂಟಲ್, ವೈದ್ಯಕೀಯ ಕೋರ್ಸ್‌ಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದ ಕೆಇಎ
ಈಗ ಹೊಸ ವಿಧಾನದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಮತ್ತು ನರ್ಸಿಂಗ್ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಆಸಕ್ತ ವಿದ್ಯಾರ್ಥಿಗಳು ಆಯಾ ಸೀಟ್ ಮ್ಯಾಟ್ರಿಕ್ಸ್ ನ್ನು ಗಮನಿಸಬೇಕು ನಂತರ, ಶುಲ್ಕ, ಕೋರ್ಸ್ ಹಾಗೂ ಆಸಕ್ತಿಗಳನ್ನು ಪರಿಗಣಿಸಿ ಆಪ್ಷನ್ ಎಂಟ್ರಿ ಶೀಟ್ ನಲ್ಲಿ ಸೀಟ್ ಗಳನ್ನು ನಮೂದಿಸಬೇಕು
ಮೊದಲ ಸುತ್ತಿನಲ್ಲಿ ಮೆರಿಟ್, ಮೀಸಲಾತಿ ಹಾಗೂ ಅಭ್ಯರ್ಥಿಗಳ ಆಪ್ಷನ್ ಎಂಟ್ರಿ ಆಧಾರದಲ್ಲಿ ಸೀಟು ಹಂಚಿಕೆಯಾಗುತ್ತದೆ. ಆದರೆ ಅಭ್ಯರ್ಥಿಗಳು ಒಂದೇ ಒಂದು ಮಂಜೂರು ಮಾಡಿದ ಸೀಟನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಪ್ರವೇಶಾತಿ ಪಡೆಯಲು ಶುಲ್ಕ ಪಾವತಿಸದೇ ಇದ್ದಲ್ಲಿ ಆ ಸೀಟನ್ನು ಖಾಲಿ ಎಂದು ಪರಿಗಣಿಸಿ ಎರಡನೇ ಸುತ್ತಿಗೆ ತೆಗೆದುಕೊಳ್ಳಲಾಗುತ್ತದೆ ಎಂದು ನಿರ್ದೇಶಕರು ವಿವರಿಸಿದ್ದಾರೆ.