ಬೆಂಗಳೂರು : ಬೆಂಗಳೂರು ಬಳಿ ಅಸ್ತಿತ್ವಕ್ಕೆ ಬರಲಿರುವ ಜ್ಞಾನ, ಆರೋಗ್ಯ, ಆವಿಷ್ಕಾರ ಮತ್ತು ಸಂಶೋಧನಾ ನಗರದ (ಕೆಎಚ್‍ಐಆರ್ ಸಿಟಿ) ಅಭಿವೃದ್ಧಿಗೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ಜಿಯೊಂಗಿ ಪ್ರಾಂತ್ಯದ ಜೊತೆಗಿನ ಸಹಯೋಗದ ಸಾಧ್ಯತೆಗಳ ಬಗ್ಗೆ ರಾಜ್ಯದ ನಿಯೋಗವು ಸಮಾಲೋಚನೆ ನಡೆಸಿತು.
ಗುರುವಾರ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು, ಜಿಯೊಂಗಿ ಪ್ರಾಂತ್ಯದ ಉಪ ರಾಜ್ಯಪಾಲ ಹಿಯುನ್ ಗೊನ್ ಕಿಮ್ ಅವರನ್ನು ಭೇಟಿಯಾಗಿತ್ತು.
‘ಎಲೆಕ್ಟ್ರಾನಿಕ್ಸ್, ಸ್ಟಾರ್ಟ್‍ಅಪ್, ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ಡಿ), ಜೈವಿಕ ತಂತ್ರಜ್ಞಾನ ಹಾಗೂ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ವಿಪುಲ ಅವಕಾಶಗಳು ಇವೆ ಎಂದು ಪಾಟೀಲ್ ತಿಳಿಸಿದರು. ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಜಿಯೊಂಗಿ ನವೋದ್ಯಮ ಶೃಂಗಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಸ್ಟಾರ್ಟ್ ಅಪ್‍ಗಳಿಗೆ ಕಿಮ್ ಆಹ್ವಾನ ನೀಡಿದರು.
ಭಾರತ ದಸಿಲಿಕಾನ್ ಕಣಿವೆ ಖ್ಯಾತಿಯ ಬೆಂಗಳೂರು ಮತ್ತು ಕೊರಿಯಾದ ಸಿಲಿಕಾನ್ ಕಣಿವೆ ಖ್ಯಾತಿಯ ಪ್ಯಾಂಗೊ ಟೆಕ್ನೊ ವ್ಯಾಲಿ ನಡುವೆ ವಾಣಿಜ್ಯ ಬಾಂಧವ್ಯ ವೃದ್ಧಿಸಲು ನಿರ್ಧರಿಸಲಾಯಿತು. ಸೋಲ್ ಮೆಟ್ರೊಪಾಲಿಟನ್ ಸರಕಾರದ ಆರ್ಥಿಕ ನೀತಿಯ ಉಪ ಮೇಯರ್ ಲೀ ಹೆ ವೊ ಅವರ ಜೊತೆಗಿನ ಭೇಟಿಯಲ್ಲಿ ಹಣಕಾಸು, ಹೂಡಿಕೆ, ನವೋದ್ಯಮ, ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೊರಿಯಾದ ಕಂಪೆನಿಗಳಿಗೆ ರಾಜ್ಯ ಸರಕಾರ ಒದಗಿಸಲಿರುವ ಸೌಲಭ್ಯಗಳನ್ನು ವಿವರಿಸಲಾಗಿದೆ.
ರಾಜ್ಯದಲ್ಲಿ ತನ್ನ ಹಣಕಾಸು ಚಟುವಟಿಕೆ ವಿಸ್ತರಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ಕೆಇಬಿ ಹನಾಬ್ಯಾಂಕ್ ತಿಳಿಸಿದೆ. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಇದ್ದರು.