ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಷ್ಟ್ರವ್ಯಾಪಿ 14 ವರ್ಷದ ಎಲ್ಲಾ ಬಾಲಕಿಯರಿಗೆ HPV(ಹ್ಯೂಮನ್ ಪ್ಯಾಪಿಲೋಮವೈರಸ್) ಲಸಿಕೆ ಅಭಿಯಾನವನ್ನು ಆರಂಭಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗಾರ್ಡಸಿಲ್ ಇಂಜೆಕ್ಷನ್(HPV ಲಸಿಕೆ) ಅನ್ನು ಉಚಿತವಾಗಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
HPV ಲಸಿಕೆ ಗರ್ಭಕಂಠದ ಕ್ಯಾನ್ಸರ್, ಜನನಾಂಗದ ನರಹುಲಿಗಳು ಮತ್ತು HPV ಯಿಂದ ಉಂಟಾಗುವ ಇತರ ಕ್ಯಾನ್ಸರ್ಗಳನ್ನು ತಡೆಯುವ ಅತ್ಯಂತ ಪರಿಣಾಮಕಾರಿ ಲಸಿಕೆಯಾಗಿದೆ. ಇದು 9 ರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ.
“ಶಿಫಾರಸು ಮಾಡಲಾದ ವಯಸ್ಸಿನ ಬಾಲಕಿಯರಿಗೆ ಒಂದೇ ಡೋಸ್ ಲಸಿಕೆ ನೀಡಿದರೆ ಬಲವಾದ ರಕ್ಷಣೆ ನೀಡುತ್ತದೆ ಎಂದು ಜಾಗತಿಕ ಮತ್ತು ಭಾರತೀಯ ವೈಜ್ಞಾನಿಕ ಪುರಾವೆಗಳು ದೃಢಪಡಿಸಿವೆ” ಎಂದು ಅಧಿಕೃತ ಮೂಲಗಳು ತಿಳಿಸಿವೆ.
“ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಈ ಲಸಿಕೆ ಸ್ವಯಂಪ್ರೇರಿತ ಮತ್ತು ಉಚಿತವಾಗಿರುತ್ತದೆ” ಎಂದು ಮೂಲಗಳು ತಿಳಿಸಿವೆ.
