Home Uncategorized ಕೇಂದ್ರ ಬಜೆಟ್: ಮಕ್ಕಳ ಅಭಿವೃದ್ಧಿ ಹಕ್ಕುಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದ ಶಿಕ್ಷಣ ತಜ್ಞ ನಿರಂಜನಾರಾಧ್ಯ...

ಕೇಂದ್ರ ಬಜೆಟ್: ಮಕ್ಕಳ ಅಭಿವೃದ್ಧಿ ಹಕ್ಕುಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದ ಶಿಕ್ಷಣ ತಜ್ಞ ನಿರಂಜನಾರಾಧ್ಯ .ವಿ.ಪಿ.

19
0

ಬೆಂಗಳೂರು: ಒಕ್ಕೂಟ ಸರಕಾರದ ಈ ಆಯವ್ಯಯವು, ರಾಜ್ಯ ಸರಕಾರಗಳು ಮಕ್ಕಳ ಅಭಿವೃದ್ಧಿ ಹಕ್ಕುಗಳನ್ನು ಜಾರಿಗೆ ತರಲು ಸಾಧ್ಯವಾಗದ ರೀತಿಯಲ್ಲಿ ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಆರೋಪಿಸಿದ್ದಾರೆ.

ಗುರುವಾರ ಪ್ರಕಟಣೆ ಹೊರಡಿಸಿರುವ ಅವರು, ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದ್ದರೂ, ಒಕ್ಕೂಟ ಸರಕಾರ ಅದರ ಆರ್ಥಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಒಟ್ಟಾರೆ , ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರಕಾರಗಳನ್ನು ಅಸಹಾಯಕ ಸ್ಥಿತಿಗೆ ತಳ್ಳುತ್ತಿದೆ ಎಂದಿದ್ದಾರೆ.

ಹಿಂದಿನ  ಆರ್ಥಿಕ ವರ್ಷದಲ್ಲಿ ( 2023-24 )ಒಕ್ಕೂಟ ಸರಕಾರವು  ಶಿಕ್ಷಣಕ್ಕಾಗಿ ರೂ.1, 16, 417 ಕೋಟಿ ಖರ್ಚು ಮಾಡಿತ್ತು . ಈ ಬಾರಿ ಅಂದರೆ, 2024-25 ನೇ ಹಣಕಾಸು ವರ್ಷಕ್ಕೆ ಈ ವೆಚ್ಚ ರೂ.1,24,638 ಕೋಟಿಗಳಿಗೆ ಏರಿಕೆಯಾಗಿದೆ. ಕಳೆದ ವರ್ಷದ ವೆಚ್ಚಕ್ಕೆ ಹೋಲಿಸಿದರೆ ಕೇವಲ ರೂ. 8221 ಕೋಟಿಗಳಷ್ಟು ಮಾತ್ರ ಹೆಚ್ಚಳವಾಗಿದೆ ಎಂದು ವಿವರಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ಮಿಷನ್ ಅಡಿಯಲ್ಲಿ ವಿವಿಧ ಕೇಂದ್ರೀಯ ಪ್ರಾಯೋಜಿತ ಯೋಜನೆಗಳಾದ ಸಮಗ್ರ ಶಿಕ್ಷಾ ಅಭಿಯಾನ, ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ , ಪಿಎಮ್‌ಶ್ರೀ , ವಿದ್ಯಾರ್ಥಿವೇತನ, ಇತ್ಯಾದಿಗಳಿಗೆ ಒಕ್ಕೂಟ ಸರ್ಕಾರ ನೀಡಿರುವ ಹಣಕಾಸನ್ನು ಸೂಕ್ಷ್ಮವಾಗಿ ಎಚ್ಚರಿಕೆಯ ಗಮನಿಸಿದರೆ , ಈ ಒಕ್ಕೂಟ ಪ್ರಾಯೋಜಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತಗಳು ದೊಡ್ಡಮಟ್ಟದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಕುತೂಹಲದ ಅಂಶವೆಂದರೆ , ಪ್ರಧಾನ ಮಂತ್ರಿ ಕೇಂದ್ರಿತ ಒಕ್ಕೂಟ ಯೋಜನೆಗಳಿಗೆ ಒದಗಿಸಿರುವ ಹಣನ್ನು ದೇಶದ ಎಲ್ಲ ಮಕ್ಕಳಿಗೆ ಸಿಗಲೇಬೇಕಾದ ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೊಳಿಸುವ ಸಮಗ್ರ ಶಿಕ್ಷಣ ಅಭಿಯಾನಕ್ಕೆ ಒದಗಿಸಿರುವ ಮೊತ್ತಕ್ಕೆ ಹೋಲಿಸಿ ನೋಡಿದರೆ ಅತೀ ಕಡಿಮೆ ಹಣವನ್ನು ಹೆಚ್ಚಿಸಲಾಗಿದೆ. ಇದು ನ್ಯಾಯಸಮ್ಮತ ಹಕ್ಕನ್ನು ದುರ್ಬಲಗೊಳಿಸಿ ಸಾಂವಿಧಾನಿಕ ಹಕ್ಕನ್ನು ಕಸಿಯುವ ಸ್ಪಷ್ಟ ಸೂಚನೆಯಾಗಿದೆ. ಮತ್ತೊಂದೆಡೆ, ಪ್ರಧಾನ ಮಂತ್ರಿಯವರ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸುವ ಯೋಜನೆಗಳು ಬಜೆಟ್‌ನಲ್ಲಿ ಹೆಚ್ಚಿನ ಹೆಚ್ಚಳವನ್ನು ಪಡೆದಿವೆ ಎಂದು ನಿರಂಜನಾರಾಧ್ಯ.ವಿ.ಪಿ ತಿಳಿಸಿದ್ದಾರೆ.

ನಮಗೆ ತಿಳಿದಿರುವಂತೆ, ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ,  ಶಿಕ್ಷಣದ ಜವಾಬ್ದಾರಿಯನ್ನು ಹೊಂದಿವೆ. ರಾಜ್ಯ ಸರ್ಕಾರಗಳು ಶಾಲೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತವೆ. ಉದಾಹರಣೆಗೆ, ಪ್ರಸಕ್ತ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಸಮಗ್ರ ಶಿಕ್ಷಾ ಅಭಿಯಾನಕ್ಕೆ ರೂ.37,500 ಕೋಟಿಗಳನ್ನು ಒದಗಿಸಿದೆ. ಈ ಮೊತ್ತವನ್ನು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗುವುದು. ಈ ಅತ್ಯಲ್ಪ ಹಣದಿಂದ ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ದುಸ್ಥಿತಿಯನ್ನು ಯಾರು ಬೇಕಾದರು ಊಹಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here