ಕೇಂದ್ರ ಸರ್ಕಾರದ ಯೋಜನೆಗಳ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಅವರು ಶನಿವಾರ ಸೂಚನೆ ನೀಡಿದ್ದಾರೆ. ಮೈಸೂರು: ಕೇಂದ್ರ ಸರ್ಕಾರದ ಯೋಜನೆಗಳ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಅವರು ಶನಿವಾರ ಸೂಚನೆ ನೀಡಿದ್ದಾರೆ.
ಮೈಸೂರಿನಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಅಧಿಕಾರಿಗಳಿಗೆ ಪ್ರತಾಪ್ ಸಿಂಹ ಅವರು ಸೂಚನೆ ನೀಡಿದರು.
ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರದ ಯೋಜನೆಗಳಾದ ಉಂಡವಾಡಿ ಮತ್ತು ಜಲ ಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ-ಆರೋಗ್ಯ ನೋಂದಣಿಯಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರಬಹುದು, ಆದರೆ, ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ.22ರಷ್ಟು ಜನರು ಮಾತ್ರ ನೋಂದಾವಣಿ ಮಾಡಿಕೊಂಡಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು ಡಿಸಿ ಡಾ.ಕೆ.ವಿ.ರಾಜೇಂದ್ರ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ನಂಜನಗೂಡು ಶಾಸಕರಾದ ದರ್ಶನ್ ದ್ರುವನಾರಾಯಣ್, ಚಾಮರಾಜ, ಕೆ.ಹರೀಶ್ ಗೌಡ, ಕೃಷ್ಣರಾಜ, ಟಿ.ಎಸ್.ಶ್ರೀವತ್ಸ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಾಪ್ ಸಿಂಹ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಭರವಸೆಗಳನ್ನು ಟೀಕಿಸಿದರು.
ಕರ್ನಾಟಕದಂತಹ ಕಲ್ಯಾಣ ರಾಜ್ಯವನ್ನು ಭಿಕ್ಷುಕರ ರಾಜ್ಯವನ್ನಾಗಿ ಮಾಡಲು ಕಾಂಗ್ರೆಸ್ ಹೊರಟಿದೆ. ಇದರಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳಿಗೆ ವಿಧಿಸಿರುವ ಷರತ್ತು ಹಾಗೂ ಕಾಲಮಿತಿಯನ್ನು ಟೀಕೆ ಮಾಡಿದರು. ‘ಮುಸ್ಲಿಂ ಕುಟುಂಬಗಳಲ್ಲಿ ಇಬ್ಬರು ಪತ್ನಿಯರಿದ್ದರೆ, ಗೃಹಲಕ್ಷ್ಮಿ ಖಾತರಿಯ ಲಾಭ ಪಡೆಯಲು ಕುಟುಂಬದ ಮುಖ್ಯಸ್ಥರಾಗುವವರು ಯಾರು?’ ಎಂದು ಪ್ರಶ್ನಿಸಿದರು.