ಇತ್ತೀಚಿನ ಕೇಂದ್ರ ಬಜೆಟ್ ಅಭಿವೃದ್ಧಿ ಆಧಾರಿತವಾಗಿದ್ದು, ಈ ಬಜೆಟ್ ರಾಜ್ಯದ ಎಲ್ಲಾ ಪ್ರಮುಖ ಕ್ಷೇತ್ರಗಲ್ಲಿನ ನಿರೀಕ್ಷೆಗಳನ್ನು ಪೂರೈಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ. ಬೆಂಗಳೂರು: ಇತ್ತೀಚಿನ ಕೇಂದ್ರ ಬಜೆಟ್ ಅಭಿವೃದ್ಧಿ ಆಧಾರಿತವಾಗಿದ್ದು, ಈ ಬಜೆಟ್ ರಾಜ್ಯದ ಎಲ್ಲಾ ಪ್ರಮುಖ ಕ್ಷೇತ್ರಗಲ್ಲಿನ ನಿರೀಕ್ಷೆಗಳನ್ನು ಪೂರೈಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕೇಂದ್ರದ ಪ್ರಸಕ್ತ ಸಾಲನ ಬಜೆಟ್ ಅಭಿವೃದ್ಧಿಗೆ ಆಧಾರಿತವಾಗಿದೆ. ಫೆಬ್ರವರಿ 17 ರಂದು ರಾಜ್ಯದಲ್ಲಿ ಬಜೆಟ್ ಮಂಡನೆಯಾಗಲಿದ್ದು, ರಾಜ್ಯದಲ್ಲಿ ಘೋಷಣೆಯಾಗಿರುವ ಯೋಜನೆಗಳಿಗೆ ಹೊಂದಾಣಿಯಾಗುವ ರೀತಿಯಲ್ಲಿ ಅನುದಾನ ನೀಡುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ 5,300 ಕೋಟಿ ರೂ.ಗಳ ನೆರವನ್ನು ಯಾವುದೇ ಷರತ್ತುಗಳಿಲ್ಲದೆ ನೀಡಲಾಗುವುದು. ರಾಜ್ಯ ಸರ್ಕಾರದ ನಿರೀಕ್ಷೆಯಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ, ಕೃಷಿ, ರೈಲ್ವೆ ಮತ್ತು ಮೂಲಸೌಕರ್ಯಗಳಂತಹ ಆದ್ಯತೆಯ ಕ್ಷೇತ್ರಗಳಿಗೆ ರಾಜ್ಯ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ.
ಕೃಷಿ ಮತ್ತು ಗ್ರಾಮೀಣ ಮೂಲಸೌಕರ್ಯಗಳಂತಹ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ಪಡೆಯುವುದು ನಮ್ಮ ಬೇಡಿಕೆಯಾಗಿತ್ತು. ಗ್ರಾಮೀಣ ಮೂಲಸೌಕರ್ಯಕ್ಕೆ ಆದ್ಯತೆ ನೀಡುವಂತೆ ಈ ಹಿಂದೆ ಕೇಂದ್ರ ಬಳಿ ಮನವಿ ಮಾಡಿಕೊಂಡಿದ್ದೆವು. ಜಲ ಜೀವನ್ ಮಿಷನ್ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಈ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.
ಬಳಿಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಆರಂಭಿಕ ಹಂತದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ತಪ್ಪು ಮಾಡಿದೆ. “ಅವರು ಡಿಪಿಆರ್ ಸಿದ್ಧಪಡಿಸಿದಾಗ, ಯಾವುದೇ ಸಮಸ್ಯೆಗಳಿರಲಿಲ್ಲ ಎಂದು ಹೇಳಿದ್ದರು … ಆದರೆ, ಈಗ ಅದು ಸುಪ್ರೀಂ ಕೋರ್ಟ್‌ನಲ್ಲಿದೆ. ನಮ್ಮ ಸರ್ಕಾರ ಯೋಜನೆಗೆ ಈಗಾಗಲೇ ಹಣ ಮಂಜೂರು ಮಾಡಿದೆ. ಸುಪ್ರೀಂ ಕೋರ್ಟ್ ಅನುಮತಿ ನೀಡಿದರೆ (ಯೋಜನೆಯೊಂದಿಗೆ ಮುಂದುವರಿಯಲು) ಕಾಮಗಾರಿ ಕೆಲಸಗಳನ್ನು ಆರಂಭಿಸಲಾಗುತ್ತದೆ ಎಂದರು.
ಕೇಂದ್ರ ಬಜೆಟ್‌ನಲ್ಲಿ ಹಲವು ಯೋಜನೆಗಳಿಗೆ ಅನುದಾನ ಹೆಚ್ಚಿಸಲಾಗಿದೆ. “ಯುವಕರಿಗೆ ಕೌಶಲ್ಯಾಭಿವೃದ್ಧಿ ನಮ್ಮ ಕಾಳಜಿಗಳಲ್ಲಿ ಒಂದಾಗಿತ್ತು… ಬಜೆಟ್’ನಲ್ಲಿ ಅದಕ್ಕೆ ಆದ್ಯತೆ ನೀಡಲಾಗಿದೆ. ರೈಲ್ವೆಗೆ 2.4 ಲಕ್ಷ ಕೋಟಿ ರೂ. ನೀಡಲಾಗಿದೆ. ಅಲ್ಲದೆ, ಮನ್ರೇಗಗೆ ನೀಡಲಾಗಿರುವ ಅನುದಾನ ಹಂಚಿಕೆಯಲ್ಲಿ ಕಡಿತ ಮಾಡಿಲ್ಲ. ಇಂತಹ ಕ್ರಮಗಳು ಕರ್ನಾಟಕಕ್ಕೆ ಸಹಕಾರಿಯಾಗಲಿವೆ ಎಂದರು.
ನಮ್ಮ ಮೆಟ್ರೋ ಕಾಮಗಾರಿ ಕುರಿತು ಮಾತನಾಡಿ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಮೆಟ್ರೋ ಸೇವೆ ಒದಗಿಸುವ ಹಂತ-4ಕ್ಕೆ ಸರ್ಕಾರ ಡಿಪಿಆರ್ ಸಿದ್ಧಪಡಿಸುತ್ತಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ಮಂಜೂರು ಮಾಡಿದ್ದಕ್ಕಾಗಿ ಕೇಂದ್ರದ ಬಜೆಟ್ ಅನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.
1960 ರ ದಶಕದಿಂದಲೂ ಈ ಯೋಜನೆಗೆ ಬೇಡಿಕೆ ಇತ್ತು, ಆದರೆ 2008 ರಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಆಡಳಿತದಲ್ಲಿ ಯೋಜನೆ ಪ್ರಾರಂಭಿಸಲಾಯಿತು. ಭದ್ರಾ ಮೇಲ್ದಂಡೆ ಯೋಜನೆಗೆ ಇಂದು ‘ರಾಷ್ಟ್ರೀಯ ಯೋಜನೆ’ ಸ್ಥಾನಮಾನ ನೀಡಲಾಗಿದೆ. ಯಾವುದೇ ಷರತ್ತುಗಳಿಲ್ಲದೆ ಮೋದಿ ಸರ್ಕಾರ ಬಜೆಟ್‌ನಲ್ಲಿ 5,300 ಕೋಟಿ ರೂ. ನೀಡಿದೆ ಎಂದು ಬಜೆಟ್‌ನಲ್ಲಿನ ಘೋಷಣೆಯ ಬಗ್ಗೆ ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು.