Home Uncategorized ಕೇರಳ ವೈದ್ಯನ ಎಕ್ಸ್‌ ಕಾರ್ಪ್‌ ಖಾತೆ ಪುನರ್‌ಸ್ಥಾಪನೆಗೆ ಹೈಕೋರ್ಟ್‌ ಅಸ್ತು

ಕೇರಳ ವೈದ್ಯನ ಎಕ್ಸ್‌ ಕಾರ್ಪ್‌ ಖಾತೆ ಪುನರ್‌ಸ್ಥಾಪನೆಗೆ ಹೈಕೋರ್ಟ್‌ ಅಸ್ತು

42
0

ದಲಿವರ್‌ಡಾಕ್‌ ಎಂದೇ ಪ್ರಸಿದ್ಧಿಯಾಗಿರುವ ಕೇರಳ ಮೂಲದ ವೈದ್ಯ ಸಿರಿಯಾಕ್‌ ಅಬ್ಬಿ ಫಿಲಿಪ್ಸ್‌ ಅವರ ಎಕ್ಸ್‌ ಕಾರ್ಪ್‌ ಖಾತೆ ಪುನರ್‌ಸ್ಥಾಪನೆಗೆ ಹೈಕೋರ್ಟ್‌ ಮಂಗಳವಾರ ಅಸ್ತು ಎಂದಿದೆ. ಬೆಂಗಳೂರು: ದಲಿವರ್‌ಡಾಕ್‌ ಎಂದೇ ಪ್ರಸಿದ್ಧಿಯಾಗಿರುವ ಕೇರಳ ಮೂಲದ ವೈದ್ಯ ಸಿರಿಯಾಕ್‌ ಅಬ್ಬಿ ಫಿಲಿಪ್ಸ್‌ ಅವರ ಎಕ್ಸ್‌ ಕಾರ್ಪ್‌ ಖಾತೆ ಪುನರ್‌ಸ್ಥಾಪನೆಗೆ ಹೈಕೋರ್ಟ್‌ ಮಂಗಳವಾರ ಅಸ್ತು ಎಂದಿದೆ.

ಹಿಮಾಲಯ ವೆಲ್‌ನೆಸ್‌ ಕಂಪೆನಿಯ ಮಾನಹಾನಿ ದಾವೆಯ ಭಾಗವಾಗಿ ಡಾ. ಫಿಲಿಪ್ಸ್‌ ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಬೆಂಗಳೂರಿನ ಅಧೀನ ನ್ಯಾಯಾಲಯ ಮಾಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಹಿಮಾಲಯ ವೆಲ್‌ನೆಸ್‌ ಮತ್ತು ಅದರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಮಾಡಿರುವ ಟ್ವೀಟ್‌ಗಳನ್ನು ಡಾ. ಫಿಲಿಪ್ಸ್‌ ಅವರು ಕಾಣದಂತೆ ಮಾಡಬೇಕು. ಇದಕ್ಕೆ ಅರ್ಜಿದಾರರ ಪರ ವಕೀಲರು ಒಪ್ಪಿರುವುದರಿಂದ ಖಾತೆ ಪುನರ್‌ ಸ್ಥಾಪನೆ ಸಂಬಂಧಿಸಿದ ಮಧ್ಯಂತರ ಅರ್ಜಿಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ನ್ಯಾಯಾಲಯವು ಆದೇಶಿಸಿದೆ.

ಅಲ್ಲದೇ, ಎಕ್ಸ್‌ ಕಾರ್ಪ್‌ಗೆ ತುರ್ತು ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ನವೆಂಬರ್‌ 2ನೇ ವಾರಕ್ಕೆ ಮುಂದೂಡಿದೆ.

ಡಾ. ಫಿಲಿಪ್ಸ್‌ ಅವರು ಯಕೃತ್‌ ವೈದ್ಯ (ಹೆಪಟೋಲೋಜಿಸ್ಟ್‌) ಮತ್ತು ಕ್ಲಿನಿಷಿಯನ್‌ ವಿಜ್ಞಾನಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರ್ಯಾಯ ಔಷಧಗಳ ಕಟು ಟೀಕಾಕಾರರಾಗಿದ್ದಾರೆ.

ಡಾ. ಫಿಲಿಪ್ಸ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ನಾನು ಹೆಪಟೋಲೋಜಿಸ್ಟ್‌ ಆಗಿದ್ದು, ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಸತ್ಯ ಹೇಳುತ್ತೇನೆ. ಇಂಥ ಕಠಿಣ ಆದೇಶವನ್ನು ಅಧೀನ ನ್ಯಾಯಾಲಯ ಎಂದಿಗೂ ಮಾಡಬಾರದಿತ್ತು… ಇಡೀ ಖಾತೆಯನ್ನು ಏಕಪಕ್ಷೀಯವಾಗಿ ನಿರ್ಬಂಧಿಸಬಹುದೇ? ಅವರು ದೂರಿನಲ್ಲಿ 2019ರಿಂದಲೂ ನನ್ನ ಹೇಳಿಕೆಗಳ ಬಗ್ಗೆ ತಿಳಿದಿದೆ ಎಂದಿದ್ದಾರೆ” ಎಂದರು.

ಆಗ ಪೀಠವು ಡಾ. ಫಿಲಿಪ್ಸ್‌ ಅವರು ಯಾವ ರೀತಿಯ ಮಾರ್ಪಾಡು ಆದೇಶಬೇಕೆಂದು ಕೋರುತ್ತಿದ್ದಾರೆ ಎಂದು ಕೇಳಿತು. ಇದಕ್ಕೆ ಸೋಂಧಿ ಅವರು ಅಧೀನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ, ಖಾತೆಯನ್ನು ಪುನರ್‌ ಸ್ಥಾಪಿಸಬೇಕು. ಆಕೇಪಾರ್ಹವಾದ ಒಂಭತ್ತು ಟ್ವೀಟ್‌ಗಳನ್ನು ಬೇಕಾದರೆ ಮುಚ್ಚಿಡಬಹುದಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಪೀಠವು ಡಾ. ಫಿಲಿಪ್ಸ್‌ ಅವರು ಆಕ್ಷೇಪಾರ್ಹವಾದ ಟ್ವೀಟ್‌ಗಳನ್ನು ಕಾಣದಂತೆ ಮುಚ್ಚಿಡುವುದಕ್ಕೆ ಒಳಪಟ್ಟು ಖಾತೆ ಪುನರ್‌ ಸ್ಥಾಪಿಸಬಹುದು ಎಂದು ಆದೇಶಿಸಿತು.

ಡಾ. ಫಿಲಿಪ್ಸ್‌ ಅವರನ್ನು ವಕೀಲರಾದ ಅಮೀತ್‌ ದತ್ತ, ಹಿಮಾಂಶು ಬಗೈ, ಗೀತಾಂಜಲಿ ಮಿರಿಯಮ್‌ ಮ್ಯಾಥ್ಯೂಸ್‌, ದೀಪ್ಶಿಕಾ ಸರ್ಕಾರ್‌ ಮತ್ತು ಸಾಯಿಕೃಷ್ಣ ಮತ್ತು ಅಸೋಸಿಯೇಟ್ಸ್‌ನ ಭಾನು, ವಿಕ್ರಮ ಉನ್ನಿ ರಾಜಗೋಪಾಲ್‌ ಅವರು ಪ್ರತಿನಿಧಿಸಿದ್ದರು.

LEAVE A REPLY

Please enter your comment!
Please enter your name here