Home Uncategorized ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ: ಉಡುಪಿ ಜಿಲ್ಲಾಧಿಕಾರಿ ಸೂಚನೆ

ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ: ಉಡುಪಿ ಜಿಲ್ಲಾಧಿಕಾರಿ ಸೂಚನೆ

15
0

ಉಡುಪಿ :ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಮೂಲ ಭೂತ ಸೌಕರ್ಯಗಳಾದ ರಸ್ತೆ ಸೇರಿದಂತೆ ವಿವಿಧ ಸೇವೆಗಳು ಹಾಗೂ ಸೌಲಭ್ಯಗಳನ್ನು ಒದಗಿಸಿ ಕೈಗಾರಿಕಾ ವಲಯವನ್ನು ಉತ್ತೇಜಿಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸೂಚನೆ ಗಳನ್ನು ನೀಡಿದ್ದಾರೆ.

ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಕ್ಲಸ್ಟರ್ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಸಭೆ ಹಾಗೂ ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣ ಕುರಿತು ಹೆಬ್ರಿ ತಾಲೂಕಿನ ಶಿವಪುರ ಹಾಗೂ ಕೆರೆಬೆಟ್ಟು ಗ್ರಾಮಗಳಲ್ಲಿ 113.59 ಎಕ್ರೆ, ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ 50.42 ಎಕ್ರೆ, ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ 101.19 ಎಕ್ರೆ ಹಾಗೂ ಉಡುಪಿಯ ಯುಪಿಸಿಎಲ್ ಸಂಸ್ಥೆಗೆ 576.45 ಎಕ್ರೆ ಜಮೀನುಗಳ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಶೀಘ್ರದಲ್ಲಿಯೇ ಪೂರ್ಣ ಗೊಳಿಸಿ ಹೊಸದಾಗಿ ಕೈಗಾರಿಕೆಗಳ ಸ್ಥಾಪನೆಗೆ ಜಮೀನಿನ ಹಂಚಿಕೆ ಗಳನ್ನು ತ್ವರಿತವಾಗಿ ಮಾಡಬೇಕೆಂದು ಕೆಐಡಿಬಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಈ ಹಿಂದೆ ಹೊಸದಾಗಿ ಕೈಗಾರಿಕಾ ಸ್ಥಾಪನೆಗಳಿಗೆ ಹಂಚಿಕೆಯಾಗಿರುವ ಜಮೀನನ್ನು ಬಳಕೆ ಮಾಡಿಕೊಳ್ಳುವುದರೊಂದಿಗೆ ಹೊಸ ಕೈಗಾರಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಪ್ರಾರಂಭಿಸಬೇಕೆಂದು ಕೈಗಾರಿಕೋದ್ಯಮಿಗಳಿಗೆ ತಿಳಿಸಿದ ಅವರು, ಕೈಗಾರಿಕೆಗಳನ್ನು ಪ್ರಾರಂಭಿಸದೇ ಇರುವ ಕೈಗಾರಿಕೋದ್ಯಮಿ ಗಳಿಗೆ ನೋಟೀಸ್ ನೀಡಲು ಸೂಚಿಸಿದರು.

ಜಿಲ್ಲೆಯ ಸಣ್ಣ ಕೈಗಾರಿಕೆ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿಯಂತೆ ಡಿ ವರ್ಗದ ಹುದ್ದೆಗಳಲ್ಲಿ ಶೇ.100ರಷ್ಟು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಪ್ರಸ್ತುತ ಶೇ.91ರಷ್ಟು ಮಾತ್ರ ಕಲ್ಪಿಸಲಾಗಿದೆ. ಇದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಜಿಲ್ಲೆಗೆ 173 ಗುರಿ ನಿಗದಿಪಡಿಸಲಾಗಿದ್ದು, ಈವರೆಗೆ 309ಕ್ಕೂ ಹೆಚ್ಚು ಮಂದಿಗೆ ಇದು ಮಂಜೂರಾಗಿದ್ದು, 34.15 ಕೋಟಿ ರೂ.ನಷ್ಟು ಸಾಲವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಕಳ ತಾಲೂಕಿನಲ್ಲಿ ಶಿಲ್ಪಕಲಾ ಕ್ಲಸ್ಟರ್ ಹಾಗೂ ಫರ್ನಿಚರ್ ಕ್ಲಸ್ಟರ್‌ಗಳ ಸ್ಥಾಪನೆಗೆ ಅಗತ್ಯವಿರುವ ಜಮೀನನ್ನು ಗುರುತಿಸುವ ಕಾರ್ಯವನ್ನು ಚುರುಕಾಗಿ ಕೈಗೊಂಡು, ಕ್ಲಸ್ಟರ್‌ಗಳ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಕೈಗಾರಿಕಾ ಪ್ರದೇಶಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸಲು ಮೇಲ್ದರ್ಜೆ ಗೇರಿಸುವ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಗುಣಮಟ್ಟದ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಉತ್ಪನ್ನಗಳನ್ನು ದೇಶಗಳಿಗೆ ರಫ್ತು ಮಾಡಲು ಉಂಟಾಗುವ ಸಣ್ಣ-ಪುಟ್ಟ ನ್ಯೂನ್ಯತೆಗಳನ್ನು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕಸ್ಟಮ್ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ ಗೊಂದಲಗಳನ್ನು ಬಗೆಹರಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಕೆಐಡಿಬಿಯ ಶ್ರೀನಿವಾಸ ಮೂರ್ತಿ, ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಹರೀಶ್ ಕುಂದರ್, ಕಾಸಿಯಾ ಪ್ರತಿನಿಧಿ ಪ್ರಶಾಂತ್ ಬಾಳಿಗ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here