ಕೈಗಾ (ಉತ್ತರ ಕನ್ನಡ): ಆತ್ಮನಿರ್ಭರ ಭಾರತ ಹಾಗೂ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯಡಿ ಅಣುಶಕ್ತಿ ಉತ್ಪಾದನೆಯಲ್ಲಿ ಸ್ವದೇಶೀಕರಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಗಿದೆ. ಕಾಂಕ್ರೀಟ್ ಸುರಿಯುವ ಮೂಲಕ ಕಾಮಗಾರಿಗೆ ಅಧಿಕೃತವಾಗಿ ಶುಭಾರಂಭ ಮಾಡಲಾಯಿತು.
700 ಮೆಗಾವಾಟ್ ಸಾಮರ್ಥ್ಯದ ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್ಗಳನ್ನು ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಕೈಗಾ ಘಟಕದ ಸೈಟ್ ನಿರ್ದೇಶಕ ಬಿ. ವಿನೋದ್ ಕುಮಾರ್ ಮಾತನಾಡಿ, “ಮೇಕ್ ಇನ್ ಇಂಡಿಯಾ ಯೋಜನೆಯಡಿ 700 ಮೆಗಾವಾಟ್ ಸಾಮರ್ಥ್ಯದ ರಿಯಾಕ್ಟರ್ಗಳನ್ನು ಸಂಪೂರ್ಣವಾಗಿ ಸ್ವದೇಶೀಕರಣ ಮಾಡಲಾಗಿದೆ. ಗುಜರಾತ್, ರಾಜಸ್ಥಾನ ಹಾಗೂ ಕರ್ನಾಟಕಕ್ಕೆ ಫ್ಲೀಟ್ ಮೋಡ್ನಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸ್ವದೇಶೀ ರಿಯಾಕ್ಟರ್ಗಳನ್ನು ಇದೇ ಮೊದಲ ಬಾರಿಗೆ ನಿಯೋಜಿಸಲಾಗುತ್ತಿದೆ ಎಂದು ಹೇಳಿದರು.
ಹಳೆಯ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಉತ್ಪಾದಿತ ವಿದ್ಯುತ್ನ ಶೇ.20ರಷ್ಟು ಹಂಚಿಕೆ ದೊರೆಯುತ್ತಿತ್ತು. ಆದರೆ, ಹೊಸ ಯೋಜನೆಯಡಿ ರಾಜ್ಯದ ಪಾಲು ಶೇ.50 ಆಗಲಿದೆ ಎಂದು ಮಾಹಿತಿ ನೀಡಿದರು.
ಅಣು ಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ್ ಮೊಹಂತಿ ಹಾಗೂ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿಗಳು ವಿಶೇಷ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದರು.
60 ತಿಂಗಳೊಳಗೆ ಘಟಕಗಳನ್ನು ಸಂಪೂರ್ಣ ಕಾರ್ಯಾಚರಣೆಗೆ ತರಲು ಗುರಿ ಹೊಂದಲಾಗಿದೆ ಎಂದು ಮೊಹಂತಿ ಅವರು ತಿಳಿಸಿದರು.
ಪ್ರಸ್ತುತ ಕೈಗಾ ಅಣು ವಿದ್ಯುತ್ ಸ್ಥಾವರದ ಒಟ್ಟು ಉತ್ಪಾದನಾ ಸಾಮರ್ಥ್ಯ 880 ಮೆಗಾವಾಟ್ ಆಗಿದ್ದು, 5 ಮತ್ತು 6ನೇ ಘಟಕಗಳು ಕಾರ್ಯಾರಂಭಿಸಿದ ಬಳಿಕ ಇದು 2,280 ಮೆಗಾವಾಟ್ಗೆ ಏರಿಕೆಯಾಗಲಿದೆ ಎಂದು ಮಾಹಿತಿ ನೀಡಿದರು.
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ (ಎನ್ಪಿಸಿಐಎಲ್) ಸಂಸ್ಥೆ ಕರ್ನಾಟಕದಲ್ಲಿ ಇನ್ನೂ 7,000 ಮೆಗಾವಾಟ್ ಸಾಮರ್ಥ್ಯ ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ,
ಸಂಸ್ಥೆಯ ಸಿಎಂಡಿ ಭುವನ್ ಚಂದ್ರ ಪಾಠಕ್ ಅವರು ಮಾತನಾಡಿ, “ಅಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದ್ದು, ಇನ್ನಷ್ಟು ಅಣು ವಿದ್ಯುತ್ ಸ್ಥಾವರಗಳು ಸ್ಥಾಪನೆಯಾಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
