ಫೋನ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸೇಲ್ಸ್ ಮ್ಯಾನೇಜರ್ ವೊಬ್ಬರ ಕೊಠಡಿಗೆ ನುಗ್ಗಿದ ದುಷ್ಕರ್ಮಿಗಳು, ಹಲ್ಲೆ ನಡೆಸಿ, ಬೆಲೆ ಬಾಳುವ ವಸ್ತುಗಳನ್ನು ಹೊತ್ತೊಯ್ದ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು: ಫೋನ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸೇಲ್ಸ್ ಮ್ಯಾನೇಜರ್ ವೊಬ್ಬರ ಕೊಠಡಿಗೆ ನುಗ್ಗಿದ ದುಷ್ಕರ್ಮಿಗಳು, ಹಲ್ಲೆ ನಡೆಸಿ, ಬೆಲೆ ಬಾಳುವ ವಸ್ತುಗಳನ್ನು ಹೊತ್ತೊಯ್ದ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿ ಮೂಲದವರಾಗಿರುವ ಆರ್.ಅಣ್ಣಾದೊರೈ ಅವರು ನಗರದ ವೈದ್ಯಕೀಯ ಉಪಕರಣಗಳ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದಿರಾನಗರದ ಅಪ್ಪಾ ರೆಡ್ಡಿ ಪಾಳ್ಯದ 9ನೇ ಅಡ್ಡರಸ್ತೆಯಲ್ಲಿ ಮನೆಯೊಂದರಲ್ಲಿ ವಾಸವಿದ್ದರು. ಬುಧವಾರ ರಾತ್ರಿ 9.45ರ ಸುಮಾರಿಗೆ ಫೋನ್ ನಲ್ಲಿ ಅಣ್ಣಾದುರೈ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರೂಮಿಗೆ ನುಗ್ಗಿರುವ ದುಷ್ಕರ್ಮಿಗಲು ಅಣ್ಣಾದುರೈ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಬಳಿಕ ರೂಮಿನಲ್ಲಿದ್ದ 1.5 ಲಕ್ಷ ರೂಪಾಯಿ ಮೌಲ್ಯದ ಎರಡು ಮೊಬೈಲ್ ಹಾಗೂ ಮತ್ತೊಂದು ಎಲೆಕ್ಟ್ರಾನಿಕ್ ಗ್ಯಾಜೆಟ್’ನ್ನು ದೋಚಿದ್ದಾರೆ. ಬಳಿಕ ರೂ.25 ಸಾವಿರ ನೀಡುವಂತೆ ಬೆದರಿಸಿದ್ದಾರೆ. ಹಣ ಇಲ್ಲ ಎಂದಾಗ ಸ್ನೇಹಿತನಿಂದ ಖಾತೆಗೆ ಹಣ ವರ್ಗಾಯಿಸಿಕೊಂಡು ನೀಡುವಂತೆ ಹೇಳಿದ್ದಾರೆ. ಇದರಿಂದ ಹೆದರಿದ ಅಣ್ಣಾದುರೈ ಅವರು ಸ್ನೇಹಿತನಿಂದ ಹಣ ಪಡೆದು, ಆರೋಪಿಗಳ ಸೂಚನೆಯಂತೆ ಅವರ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣವನ್ನು ನೀಡಿದ್ದಾರೆ.
ಇದನ್ನೂ ಓದಿ: ಕ್ಯಾಬ್ ನಲ್ಲಿ ವೈಯಕ್ತಿಕ ವಿಚಾರ ಮಾತನಾಡಿದ್ದ ಗೃಹಿಣಿಗೆ ಬ್ಲ್ಯಾಕ್ ಮೇಲ್: ಚಾಲಕ ಬಂಧನ
ಘಟನೆ ವೇಳೆ ನನ್ನನ್ನು ಕೊಲ್ಲದಂತೆ ಆರೋಪಿಗಳ ಕಾಲಿಗೆ ಬಿದ್ದು ಬೇಡಿಕೊಂಡಿದ್ದೆ. ಆರೋಪಿಗಳು ಸುಮಾರು 2 ಗಂಟೆಗಳ ಕಾಲ ರೂಮಿನಲ್ಲಿದ್ದರು. ಘಟನೆ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದೆ. ಹೀಗಾಗಿ ರೂಮ್ ಖಾಲಿ ಮಾಡಿದೆ ಎಂದು ಅಣ್ಣಾದುರೈ ಅವರು ಹೇಳಿದ್ದಾರೆ.
ಹಣ ಹಾಗೂ ಗ್ಯಾಜೆಟ್ ಗಳ ದೋಚಿದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಬಳಿಕ ಪಕ್ಕದಲ್ಲೇ ಇರುವ ಮನೆಗೆಲಸದ ಮಹಿಳೆಯ ಮನೆಗೆ ಹೋಗಿದ್ದೆ. ಅವರ ಮೊಬೈಲ್ ಫೋನ್ ತೆಗೆದುಕೊಂಡು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದೆ. ಕೆಲವೇ ನಿಮಿಷಗಳಲ್ಲಿ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿತು. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿಸಿದ್ದಾರೆ.
ಪೊಲೀಸರು ಇಷ್ಟು ಶೀಘ್ರಗತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆಂದು ನಿರೀಕ್ಷಿಸಿರಲಿಲ್ಲ. ಬಾಗಿಲು ತೆರೆದಿದ್ದರಿಂದ ಆರೋಪಿಗಳು ಸುಲಭವಾಗಿ ಒಳಗೆ ಬರುವಂತಾಗಿತ್ತು. ಕೊಠಡಿಯೊಳಗೆ ನುಗ್ಗಿದ ಆರೋಪಿಗಳು, ಒಳಗಿನಿಂದ ಬಾಗಿಲನ್ನು ಲಾಕ್ ಮಾಡಿದ್ದರು ಎಂದು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಇದೀಗ ಐಪಿಸಿ ಸೆಕ್ಷನ್ 397 ಮತ್ತು ಐಸಿಪಿ ಸೆಕ್ಷನ್ 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.