ಕೊಡಗಿನ ಸರ್ಕಾರಿ ಜೂನಿಯರ್ ಕಾಲೇಜುಗಳಲ್ಲಿ ಖಾಯಂ ಭೋದಕ ಸಿಬ್ಬಂದಿಯ ಕೊರತೆಯಿಂದ ಕಲಿಕೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಮಡಿಕೇರಿ: ಕೊಡಗಿನ ಸರ್ಕಾರಿ ಜೂನಿಯರ್ ಕಾಲೇಜುಗಳಲ್ಲಿ ಖಾಯಂ ಭೋದಕ ಸಿಬ್ಬಂದಿಯ ಕೊರತೆಯಿಂದ ಕಲಿಕೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಜಿಲ್ಲಾ ಪಿಯು ಮಂಡಳಿಯಲ್ಲಿ ಶೇ.50ಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಸಿಬ್ಬಂದಿ ಕೊರತೆಯ ನಡುವೆಯೇ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಎರಡು ತಿಂಗಳಿಂದ ವೇತನ ನೀಡಿಲ್ಲ.
ಇದನ್ನು ಓದಿ: ಕೊಡಗಿನ ಗಡಿಭಾಗದ ಕನ್ನಡ ಶಾಲೆಯಲ್ಲಿ ಶಿಕ್ಷಕರ ಕೊರತೆ, ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
“ಜಿಲ್ಲೆಯು, ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಜೂನಿಯರ್ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯನ್ನು ತೀವ್ರವಾಗಿ ಎದುರಿಸುತ್ತಿದೆ. ಇಷ್ಟು ದೊಡ್ಡ ಪ್ರಮಾಣದ ಸಿಬ್ಬಂದಿ ಕೊರತೆಯಿಂದ ಸಂಸ್ಥೆ ನಡೆಸಲು ನಮಗೆ ಸಾಧ್ಯವಾಗುತ್ತಿಲ್ಲ. ಕೆಲವು ವಿಷಯಗಳಿಗೆ ಸೂಕ್ತ ಅತಿಥಿ ಉಪನ್ಯಾಸಕರು ಸಿಗದೇ ಅಸಹಾಯಕರಾಗಿದ್ದೇವೆ’ ಎಂದು ಜಿಲ್ಲೆಯ ಹೆಸರಾಂತ ಜೂನಿಯರ್ ಕಾಲೇಜಿನ ಪ್ರಾಂಶುಪಾಲರೊಬ್ಬರು ಹೇಳಿದ್ದಾರೆ.
ಅತಿಥಿ ಉಪನ್ಯಾಸಕರನ್ನು ಹುಡುಕುವುದು ಆಡಳಿತ ಮಂಡಳಿಗೆ ದೊಡ್ಡ ಕೆಲಸವಾಗಿದೆ ಮತ್ತು ಅನೇಕ ವಿಷಯಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಮತ್ತು ಕಂಪ್ಯೂಟರ್ ಸೈನ್ಸ್ ಉಪನ್ಯಾಸಕ ಹುದ್ದೆಗೆ ನೇಮಕ ಮಾಡಿಕೊಳ್ಳಲು ಸೂಕ್ತ ಅಭ್ಯರ್ಥಿಗಳ ಕೊರತೆ ಇದೆ ಎಂದು ಅವರು ತಿಳಿಸಿದ್ದಾರೆ.
ಕೊಡಗಿನಲ್ಲಿ ಸರ್ಕಾರ ಹಾಗೂ ಅನುದಾನಿತ ಕಾಲೇಜುಗಳಿಗೆ ಒಟ್ಟು 149 ಕಾಯಂ ಉಪನ್ಯಾಸಕರ ಹುದ್ದೆಗಳು ಮಂಜೂರಾಗಿವೆ. ಆದಾಗ್ಯೂ, ಇಲಾಖೆಯು ಪ್ರಸ್ತುತ 79 ಖಾಲಿ ಹುದ್ದೆಗಳನ್ನು ಹೊಂದಿದ್ದು, ಶೇ. 53 ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಮಂಜೂರಾದ ಹುದ್ದೆಗೆ 2020ರಲ್ಲಿ ಕೊನೆಯ ಬಾರಿ ನೇಮಕಾತಿ ನಡೆದಿದ್ದು, ಈಗ ಹಲವಾರು ಉಪನ್ಯಾಸಕರು ನಿವೃತ್ತಿ ಅಥವಾ ವರ್ಗಾವಣೆ ಪಡೆದಿದ್ದಾರೆ. ಹೀಗಾಗಿ ಕಾಲೇಜು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.