ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿದೆ. ಇದನ್ನ ನಿರ್ಮಿಸಿರುವ ಪ್ರೊಡ್ಯೂಸರ್ ಸೂರಪ್ಪ ಬಾಬು ಇದೀಗ ಕೋಟಿಗೊಬ್ಬ ಚಿತ್ರದ ಈ ಒಂದು ಸೆಲೆಬ್ರೇಷನ್ ಮಾಡಿದ್ದಾರೆ.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ನಿರ್ದೇಶಕ ನಾಗಣ್ಣ, ಹಿರಿಯನಟ ದೇವರಾಜ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ಸಾಹಿತಿ ಕೆ.ಕಲ್ಯಾಣ್ ಹಾಗೂ ಇತರರು ಉಪಸ್ಥಿತರಿದ್ದರು. ನಿರ್ಮಾಪಕ ಸೂರಪ್ಪಬಾಬು ತಮ್ಮ ಹಾಗೂ ವಿಷ್ಣುವರ್ಧನ್ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.
ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಸಾಮಾನ್ಯವಾಗಿ ನಾನು ಸಿನಿಮಾ ಸಮಾರಂಭಗಳಿಗೆ ಹೋಗುವುದಿಲ್ಲ, 25 ವರ್ಷಗಳ ನಂತರ ಅವರನ್ನು ನೀವೆಲ್ಲ ನೆನಪಿಸಿಕೊಳ್ಳುತ್ತಿರುವುದು ವಿಶೇಷ ಎನಿಸಿತು.ಅದಕ್ಕಾಗೇ ನಾನಿಲ್ಲಿಗೆ ಬಂದೆ. ವಿಷ್ಣುವರ್ಧನ್ ಅವರ ಬಗ್ಗೆ ನಾನು ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಅವರು ಇಡೀ ಕುಟುಂಬ ಕೂತು ನೋಡುವಂಥ ಚಿತ್ರಗಳನ್ನಷ್ಟೇ ಮಾಡುತ್ತಿದ್ದರು ಎಂದು ಅವರ ಗುಣಗಾನ ಮಾಡಿದರು.
ನಟ ದೇವರಾಜ್ ಮಾತನಾಡಿ ವಿಷ್ಣು ಅವರು ನಾನು ಯಾವಾಗ ಮನೆಗೆ ಹೋದರೂ ಒಬ್ಬ ತಮ್ಮನ ಥರ ಆತ್ಮೀಯತೆಯಿಂದ ಬರಮಾಡಿಕೊಂಡು, ಅವರ ಮನೆಯ ತೂಗುಯ್ಯಾಲೆಯಲ್ಲಿ ಕೂರಿಸಿಕೊಳ್ಳುತ್ತಿದ್ದರು, ಅಲ್ಲಿ ಭಾರತಿ ಅವರು ಕೈತುತ್ತು ನೀಡುತ್ತಿದ್ದರು. ಅವರ ಶಿಸ್ತು ಸಂಯಮಗಳನ್ನೇ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಮುಂಬೈನಲ್ಲಿ ಈ ಚಿತ್ರದ ಶೂಟಿಂಗ್ ಗಾಗಿ 30 ದಿನಗಳ ಕಾಲ ಅವರ ಜೊತೆ ಕಳೆದದ್ದು ಮರೆಯಲಾಗದು. ಸೂರಪ್ಪ ಚಿತ್ರದಲ್ಲಿ ನಾನು ಅವರ ವಿಗ್ರಹ ಒಡೆದು ಹಾಕುವ ಸನ್ನಿವೇಶವಿದ್ದರಿಂದ ಆ ಥರದ ಪಾತ್ರ ಮಾಡಲು ಒಪ್ಪಿಕೊಳ್ಳಲಿಲ್ಲ. ಆದರೆ ಈ ಚಿತ್ರಕ್ಕೆ ಕರೆ ಬಂದಾಗ ಬ್ಯುಸಿ ಇದ್ದರೂ ತಕ್ಷಣ ಒಪ್ಪಿ ಇನ್ಸ್ ಪೆಕ್ಟರ್ ಪಾತ್ರ ಮಾಡಿದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಉಪೇಂದ್ರ ಮಾತನಾಡಿ ವಿಷ್ಣು ಸಾರ್ ಅವರ ಬಗ್ಗೆ ಹೇಳೊದು ತುಂಬಾ ಇದೆ. ಅವರನ್ನು ಮಾತಾಡಿಸಬೇಕೆಂದೇ ನಾನು ಅವರ ಮನೆಗೆ ಹೋಗ್ತಿದ್ದೆ. ಆಧ್ಯಾತ್ಮ, ದೇವರ ಬಗ್ಗೆ ತುಂಬಾ ಹೇಳ್ತಿದ್ದರು. ಅಂಥ ಮಹಾನ್ ವ್ಯಕ್ತಿ ಮಾತು ಕೇಳೋದೇ ಪುಣ್ಯ. ಅವರಿಂದ ನಾನು ಸ್ಪೂರ್ತಿ ಪಡೆಯುತ್ತಿದ್ದೆ. ನಿಮ್ಮ ಸಿನಿಮಾಗಳು ಬೇರೆಯದೇ ಪ್ರೇಕ್ಷಕರನ್ನು ಹುಟ್ಟು ಹಾಕ್ತಿವೆ ಎಂದು ನನ್ನ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಿದ್ದರು. ಇನ್ನು ನನ್ನನ್ನು ತರ್ಲೆ ನನ್ಮಗ ಚಿತ್ರದ ಮೂಲಕ ನಿರ್ದೇಶಕನನ್ನಾಗಿ ಪರಿಚಯಿಸಿದ್ದೇ ಸೂರಪ್ಪಬಾಬು ಎಂದು ಹೇಳಿದರು.
ಪ್ರಿಯಾಂಕಾ ಉಪೇಂದ್ರ ಮಾತನಾಡಿ, ನಾನು ತಮಿಳು ಚಿತ್ರದ ಶೂಟಿಂಗ್ ನಲ್ಲಿದ್ದಾಗ ಈ ಸಿನಿಮಾದಲ್ಲಿ ನಟಿಸಲು ಆಫರ್ ಬಂತು. ನನಗೆ ತುಂಬಾ ಭಯವಾಯ್ತು. ನಂತರ ಉಪೇಂದ್ರ ಅವರೇ ಅಂಥಾ ಮಹಾನ್ ಕಲಾವಿದ, ಹೃದಯವಂತ ವ್ಯಕ್ತಿಯ ಜತೆ ನಟಿಸುವ ಅವಕಾಶ ಬಂದಿರೋದೇ ನಿನ್ನ ಪುಣ್ಯ. ಫಸ್ಟ್ ಒಪ್ಕೋ ಎಂದರು. ನಾನೀ ಚಿತ್ರದಲ್ಲಿ ನಟಿಸಲು ಮೂಲ ಕಾರಣ ಉಪೇಂದ್ರ. ಅವರಿಂದ ನಾನು ತುಂಬಾ ಕಲಿತಿದ್ದೇನೆ ಎಂದರು.
ನಂತರ ಗಣೇಶ್ ಮಾತನಾಡಿ ನಾನು ವಿಷ್ಣು ಸಾರ್ ದೊಡ್ಡ ಅಭಿಮಾನಿ. ಅವರಂತೇ ನನ್ನ ಕೈಗೂ ಕಡಗ ಹಾಕ್ಕೊಂಡಿದ್ದೇನೆ. ಹಾಗೂ ಅವರ ಸಿನಿಮಾಗಳನ್ನು ಬ್ಲಾಕ್ ಟಿಕೆಟ್ ತಗೊಂಡು ನೋಡ್ತಿದ್ದೆ. ಅವರು ನೀನು ಯಾವಾಗಲೂ ಸಂತೋಷವಾಗಿರುವಂತೆ ಇರಬೇಡ, ಸಂತೋಷವಾಗಿರು ಎನ್ನುತ್ತಿದ್ದರು ಎಂದು ಹೇಳಿದರು.
ನಂತರ ಗುರುದತ್ ಮಾತನಾಡಿ ಶಿವಣ್ಣ ಹಾಗು ವಿಷ್ಣು ಸಾರ್ ಒಂದು ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಸ್ಕ್ರಿಪ್ಟ್ ಲೇಟಾಗಿದ್ದರಿಂದ ಆಗಲಿಲ್ಲ. ಶಿವಣ್ಣನ ಮೇಲೆ ಅವರು ತುಂಬಾ ಅಭಿಮಾನ ಇಟ್ಕೊಂಡಿದ್ದರು. ಒಮ್ಮೆ ಅಶೋಕಾ ಹೋಟೆಲಿನಲ್ಲಿ ಅವರ ಚಿತ್ರದ ಸಮಾರಂಭವಿತ್ತು. ಆಗ ನನ್ನನ್ನು ಕರೆದು ಶಿವಣ್ಣನನ್ನು ಕರೆಸು, ನಾನು ಅವರ ಜೊತೆ ಮಾತಾಡಬೇಕು ಅಂದಿದ್ರು. ಶಿವಣ್ಣ ಬಂದಾಗ ಆತ್ಮಿಯತೆಯಿಂದ ಬರಮಾಡಿಕೊಂಡರು. ನಂತರ ಕೈಲಿ ಕಟ್ಟಿಕೊಂಡಿದ್ದ, ಎಂಜಿಆರ್ ಗಿಫ್ಟ್ ಆಗಿ ಕೊಟ್ಟ ವಾಚನ್ನೇ ಶಿವಣ್ಣಗೆ ಕೊಟ್ಟು ನೀನು ಕರ್ನಾಟಕವೇ ಇಷ್ಟೊಡುವಂಥ ದೊಡ್ಡ ಕಲಾವಿದ ಆಗ್ತೀಯ, ಅದನ್ನು ನಾನೂ ನೋಡುತ್ತೇನೆ ಎಂದಿದ್ದರು ಎಂದು ಆ ಘಟನೆಯನ್ನು ನೆನಪಿಸಿಕೊಂಡರು.
